
ನವಪಕ್ಷ, ಒಕ್ಕೂಟದ ಕಡೆಗೆ ಜನರ ಒಲವು: ದೇವನೂರ ಮಹಾದೇವ
ಮೈಸೂರು: ಟಿ.ಎನ್.ಪ್ರಕಾಶ್ ಕಮ್ಮರಡಿ ಮುಂದಾಳತ್ವದಲ್ಲಿ ನಡೆದ ಸಮೀಕ್ಷೆಗೆ ಒಳಪಟ್ಟ ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತಹ ಆಳ್ವಿಕೆಯ ಸಂಸಾರ ಮಾಡಿದ ಪಕ್ಷಗಳನ್ನು ಹೊರತುಪಡಿಸಿ ಆಳ್ವಿಕೆ ಮಾಡದಿರುವ ನವಪಕ್ಷ ಅಥವಾ ಒಕ್ಕೂಟದ ಕಡೆಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.
ಪ್ರೊ.ಮಧು ದಂಡವತೆ ಜನ್ಮ ಶತಮಾನೋತ್ಸವ ಹಿನ್ನಲೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಮುಕ್ತ ಮತದಾನ ಸಮರ್ಥ ಸರ್ಕಾರ-ಜನತಂತ್ರದ ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಾಗ್ನೋಸ್ಟಿಕ್ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನವಪಕ್ಷಗಳತ್ತ ಮತದಾರರ ಅಭಿಪ್ರಾಯ ಒಟ್ಟು ಶೇ.46 ಇದೆ. ಇಷ್ಟನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷವೂ ಗಳಿಸಿಲ್ಲ. ಇದು ಮೇಲ್ನೋಟಕ್ಕೆ ಶುಭ ಸೂಚನೆ ಎಂಬಂತೆ ಕಾಣುತ್ತಿದೆ ಎಂದರು.
ಮಾಧ್ಯಮಗಳು ಜನರನ್ನು ಜಾಗೃತಗೊಳಿಸುವ ಬದಲಿಗೆ ದಿಕ್ಕು ತಪ್ಪಿಸುತ್ತಿವೆ ಎಂದು ಮುಕ್ಕಾಲು ಪಾಲು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ಮತದಾರರು ಜಾಗೃತಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಪ್ರಸ್ತುತ ಸರ್ಕಾರ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ನಿಯಂತ್ರಣ ಮಾಡದಿರುವ ಬಗ್ಗೆ ಹಾಗೂ ಕೋವಿಡ್ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವ ಬಗ್ಗೆ ಜನರಲ್ಲಿ ಬೇಸರ ಅಧಿಕವಾಗಿದೆ. ಬಲತ್ಕಾರದ ಭೂ ಸ್ವಾಧೀನ ರೈತರ ಆತಂಕ ಹೆಚ್ಚಿಸಿದೆ. ಮುಖ್ಯವಾಗಿ ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಕೋಮು ಗಲಭೆ ಮತೀಯ ವಿವಾದಗಳು ಸಹಜವಾಗಿ ಹುಟ್ಟಿರುವುದಿಲ್ಲ. ಎಂಬ ಎಚ್ಚರ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮತದಾರರಲ್ಲಿ ಕಂಡು ಬರುತ್ತದೆ. ಆಡಳಿತ ಪಕ್ಷದ ಮೇಲೆ ನಕಾರಾತ್ಮಕ ಭಾವನೆ ಹೆಚ್ಚುತ್ತಿರುವುದನ್ನು ಸಮೀಕ್ಷೆ ತಿಳಿಸುತ್ತದೆ.
ಹೀಗಿದ್ದೂ ಮುಂದಿನ ಚುನಾವಣೆಯಲ್ಲಿ ಹಣ ಮುಂತಾದ ಆಮಿಷಗಳು ಹಾಗೂ ಮಾಧ್ಯಮಗಳ ಸುಳ್ಳು ನಿರೂಪಣೆಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕವೂ ಮತದಾರರಲ್ಲಿದೆ. ಈ ಆತಂಕ ನನ್ನದೂ ಆಗಿದೆ.
ನಿಗೂಢ ಮತದಾರರು. ಶೇಕಡ 23ರಿಂದ 35ರಷ್ಟು ಇದೆ. ನಮ್ಮ ಮತದಾರರ ನಿಗೂಢತೆ ತುಂಬಾ ಹೆಚ್ಚೆನಿಸಿತು. ನಿಗೂಢತೆ ಹೆಚ್ಚಿದ್ದರೆ ನಮ್ಮ ಸುತ್ತಮುತ್ತ ವಾತಾವರಣ ದುಷ್ಟವಾಗಿದೆ ಅಂತಲೇ ಅರ್ಥ. ಉದಾಹರಣೆಗೆ ಅಲ್ಪಸಂಖ್ಯಾತರಲ್ಲಿ ನಿಗೂಢತೆಗೆ ಭೀತಿ ಕಾರಣವಾಗಿರಬಹುದು. ಹಾಗೇ ಮಹಿಳೆ ಮತ್ತು ಹಿರಿಯ ನಾಗರಿಕರಲ್ಲಿ ಹೆಚ್ಚು ನಿಗೂಢತೆ ಇದೆ ಎಂದಾದರೆ ಯಾಕೆ ಯಾರ್‍ಯಾರದೊ ಕೆಂಗಣ್ಣಿಗೆ ಬೀಳಬೇಕು ಅಂತ ಇವರು ಹೆಚ್ಚು ಹುಷಾರು ವಹಿಸಿರಬಹುದು. ಹಾಗೇ ಹೈದರಾಬಾದ್ ಕರ್ನಾಟಕದ ಕಡೆಗೂ ಸಾಕಷ್ಟು ನಿಗೂಢ ಮತದಾರರು ಇದ್ದಾರೆ ಎಂದರು.
ನವದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದ ಪ್ರೊ.ಡಿ.ಕೆ.ಗಿರಿ, ಸಮಾಜವಾದಿ ಧುರೀಣ ಬಿ.ಆರ್.ಪಾಟೀಲ್, ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಅನೀಸ್ ಪಾಷ, ಟಿ.ಎನ್.ಪ್ರಕಾಶ್ ಕಮ್ಮರಡಿ, ಶ್ರೀಕಂಠಮೂರ್ತಿ ಮುಂತಾದವರು ಭಾಗವಹಿಸಿದ್ದರು.