ನವೋದಯ ಸ್ವ-ಸಹಾಯ ಸಂಘಗಳು ಅನೇಕ ಕುಟುಂಬಗಳ ಬದುಕಿನ ಭರವಸೆ –  ಶಾಸಕ ಸುಕುಮಾರ್‌ ಶೆಟ್ಟಿ

Spread the love

ನವೋದಯ ಸ್ವ-ಸಹಾಯ ಸಂಘಗಳು ಅನೇಕ ಕುಟುಂಬಗಳ ಬದುಕಿನ ಭರವಸೆ –  ಶಾಸಕ ಸುಕುಮಾರ್‌ ಶೆಟ್ಟಿ

ಕುಂದಾಪುರ: ಬಡವರು, ರೈತಾಪಿ ಜನರಿಗೆ, ಮಹಿಳೆಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಡುತ್ತಿರುವ ಎಸ್ ಸಿ ಡಿ ಸಿ ಸಿ ಬ್ಯಾಂಕ್ ತನ್ನ 107ನೇ ಶಾಖೆಯನ್ನು ಶಿರೂರಿನಲ್ಲಿ ಪ್ರಾರಂಭಿಸುರುವುದು ಸಂತಸ ನೀಡಿದೆ‌.ನವೋದಯ ಸ್ವ-ಸಹಾಯ ಸಂಘಗಳು ಅನೇಕ ಕುಟುಂಬಗಳ ಬದುಕಿನ ಭರವಸೆಯಾಗಿದೆ. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಇನ್ನಷ್ಟು ಹೊಸ ಶಾಖೆಗಳು ಆರಂಭಗೊಳ್ಳಲಿ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಹೇಳಿದರು‌.

 ಅವರು ಸೋಮವಾರ ಶಿರೂರಿನ ಪ್ರಭು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ದ.ಕ ಜಿಲ್ಲಾ‌ ಕೇಂದ್ರ ಸಹಕಾರಿ ಬ್ಯಾಂಕ್ ನ 107ನೇ ಶಿರೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಶಿರೂರಿನಲ್ಲಿ ವಿದೇಶಗಳಲ್ಲಿ ದುಡಿಯುವವರ ಸಂಖ್ಯೆಯೇ ಹೆಚ್ಚಿದೆ‌. ತಾಲೂಕಿನಲ್ಲೇ ಅತೀ ಹೆಚ್ಚು ಆರ್ಥಿಕ ವಹಿವಾಟು ನಡೆಯುವುದು ಶಿರೂರಿನಲ್ಲಿ. ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ ಶಿರೂರಿನಲ್ಲಿ ಶಾಖೆ ಆರಂಭಗೊಂಡಿದೆ. ತಲ್ಲೂರು, ಉಪ್ಪುಂದ ಭಾಗದಲ್ಲಿ ಶಾಖೆ ತೆರೆಯುವ ತಯಾರಿ ನಡೆಯುತ್ತಿದ್ದು, ನನ್ನ ಕ್ಷೇತ್ರದಲ್ಲಿ‌ ನಾಲ್ಕು ಶಾಖೆಗಳಾಗುತ್ತಿರುವುದು ಖುಷಿ ನೀಡಿದೆ. ಸಹಕಾರಿ‌ ಕ್ಷೇತ್ರದಲ್ಲಿ ಅತೀ ಹೆಚ್ಚು ಅನುಭವವಿರುವ ರಾಜೇಂದ್ರ ಕುಮಾರ್ ಅವರು ಸಹಕಾರಿ‌ ಕ್ಷೇತ್ರವನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ತಮ್ಮ‌ 28 ವರ್ಷಗಳ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಶಿರೂರು ಭಾಗದ ಜನರು ಶ್ರೀಮಂತರು ಮಾತ್ರವಲ್ಲ. ಹೃದಯ ಶ್ರೀಮಂತಿಯುಳ್ಳವರು. ನಮ್ಮ ಶಾಖೆ ಆರಂಭದಲ್ಲೇ ಇಲ್ಲಿನ ಜನರು ಇದನ್ನು ನಿರೂಪಿಸಿದ್ದಾರೆ. ಹತ್ತು ಕೋಟಿಗೂ ಮಿಕ್ಕಿ ಠೇವಣಿ ಹಾಗೂ ಒಂದುವರೆ ಸಾವಿರದಷ್ಟು ಖಾತೆಗಳನ್ನು ಆರಂಭಿಸಿ ಒಂದು ಕೋಟಿಯಷ್ಟು ಸಾಲ ಪಡೆದಿದ್ದಾರೆ‌. ರಾಜಕೀಯ ಕ್ಷೇತ್ರಕ್ಕಿಂತ ಸಹಕಾರಿ‌ ಕ್ಷೇತ್ರವೇ ಒಳ್ಳೆಯದು ಅನ್ನಿಸಿದೆ. ಯಾರೇನೆ ಹೇಳಿದರೂ ನಾನು ನಿಮ್ಮೊಂದಿಗೆ‌ ಸಹಕಾರಿ ಕ್ಷೇತ್ರದಲ್ಲೇ ದುಡಿಯುವೆ. ಶೀಘ್ರವೇ ಇನ್ನೂ ಮೂರು ಶಾಖೆಗಳನ್ನು ಮಾಡಿ 110 ಶಾಖೆಗಳನ್ನು ಪೂರೈಸುತ್ತೇವೆ. ಎಂದರು.

ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರಿನಲ್ಲಿ ಶಾಖೆ ಆರಂಭಿಸಬೇಕೆಂದು ಇಪ್ಪತ್ತು ವರ್ಷದ ಹಿಂದೆಯೇ ಅಂದುಕೊಂಡಿದ್ದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಈ ವರ್ಷದ ಆರಂಭದಲ್ಲಿ ಶಾಖೆ ಪ್ರಾರಂಭ ಮಾಡಿದ್ದೇವೆ. ಶಿರೂರಿನ ಅಭಿವೃದ್ದಿಗೆ ನಮ್ಮ‌ ಶಾಖೆ ಖಂಡಿತವಾಗಿಯೂ ಸಹಕಾರಿಯಾಗಲಿದೆ. 119 ವರ್ಷಗಳಿಂದ‌ ಸಹಕಾರಿ‌ ಕ್ಷೇತ್ರ ಬೆಳೆದು ಬಂದಿದೆ. ಸಹಕಾರಿ‌ ಕ್ಷೇತ್ರಕ್ಕೆ ವಿಶೇಷವಾದ ಮಹತ್ವವಿದೆ. ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ‌ ಕ್ಷೇತ್ರವಿದ್ದರೆ ಅದು ಸಹಕಾರಿ‌ ಕ್ಷೇತ್ರ ಮಾತ್ರ ಎಂದು ಎಂ.ಎನ್ ರಾಜೇಂದ್ತ ಕುಮಾರ್ ಹೇಳಿದರು.

ನೂತನ ಶಾಖೆಯ ಗಣಕೀಕರಣ ಘಟಕವನ್ನು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಶಿರೂರು ಗ್ರಾ.ಪಂ ಅಧ್ಯಕ್ಷೆ ದಿಲ್ಶಾದ್ ಬೇಗಂ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಟ್ಟಡ ಮಾಲಕ ಪಾಂಡುರಂಗ ಆರ್ ಪ್ರಭು, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಕೆ. ಹರಿಶ್ಚಂದ್ರ ಹೆಗ್ಡೆ, ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ ಇದ್ದರು.

ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ನಿರ್ದೇಶಕರಾದ ಎಸ್ ರಾಜು ಪೂಜಾರಿ ಪ್ರಸ್ತಾಪಿಸಿ ಸ್ವಾಗತಿಸಿದರು. ನಿರ್ದೇಶಕ ಎಂ ಮಹೇಶ್ ಹೆಗ್ಡೆ ಧನ್ಯವಾದವಿತ್ತರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.


Spread the love