ನಾಗಬನಕ್ಕೆ ಸ್ಥಳದಾನ ಮಾಡಿದ ಯು.ಟಿ.ಖಾದರ್!

Spread the love

ನಾಗಬನಕ್ಕೆ ಸ್ಥಳದಾನ ಮಾಡಿದ ಯು.ಟಿ.ಖಾದರ್!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆಲ್ಲಾ ಕೋಮುಗಲಭೆಗಳು ನಡೆಯುತ್ತವೆ ಎಂಬ ವಿಚಾರ ಸಾಮಾನ್ಯವಾಗಿ ಸುದ್ದಿಯಾಗುತ್ತದೆ.
ಆದರೆ ಕೋಮುಸಾಮರಸ್ಯ ಮೆರೆಯುವ ಹಲವು ನಿದರ್ಶನಗಳು ಇಲ್ಲಿವೆ. ಪ್ರತಿ ವರ್ಷ ನಾಗರಪಂಚಮಿ ಬಂದಾಗ ನೆನಪಾಗುವುದು ಈಗ ಸ್ಪೀಕರ್ ಆಗಿರುವ ಮಂಗಳೂರು ಶಾಸಕ ಯು.ಟಿ.ಖಾದರ್ ಅವರ ಜಮೀನಿನ ಭಾಗದಲ್ಲಿ ನಡೆಯುತ್ತಿರುವ ನಾಗಾರಾಧನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುತ್ತೂರು ಸಮೀಪ ಹಳ್ಳಿ ಪ್ರದೇಶ ಪುಣಚ. ಇಲ್ಲಿನ ಪರಿಯಲ್ತಡ್ಕ ಎಂಬಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಪೂರ್ವಜರ ಜಾಗವಿದೆ. ಅಡಕೆ ತೆಂಗು ಸಹಿತ ವಿವಿಧ ಬೆಳೆಗಳನ್ನು ಅಲ್ಲಿ ಬೆಳೆಯುತ್ತಾರೆ. ಆ ಜಮೀನಿನ ಒಂದು ಭಾಗದಲ್ಲಿ ಈಗಲೂ ನಾಗರಪಂಚಮಿ ಅದ್ದೂರಿಯಾಗಿಯೇ ನಡೆಯುತ್ತಿದೆ.

ಹಿರಿಯರ ಕಾಲದಲ್ಲಿ ಖಾದರ್ ಅವರ ಜಾಗ ಹಿಂದುಗಳಾದ ದಳವಾಯಿ ಕುಟುಂಬದ ಅಧೀನದಲ್ಲಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತು. ಪಾಲು ಮಾಡುವಾಗ ಅದು ಖಾದರ್ ಪಾಲಾಯಿತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು.

ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತು. ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲಜಾಗದಲ್ಲಿ ಪೂಜೆ ನಡೆಯಬೇಕೆಂದು ಕಂಡುಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು.

ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಲ್ಲಿ ಬೇಡಿಕೆ ಇಟ್ಟಿತು. ವಿಷಯ ತಿಳಿದ ಖಾದರ್ ಅವರು ಕೇಳಿದ 10 ಸೆಂಟ್ಸ್ ಗೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟರು.

ಇದೀಗ ಹಲವು ವರ್ಷಗಳಿಂದ ಅಲ್ಲಿ ನಾಗಾರಾಧನೆ ನಡೆಯುತ್ತಿದೆ. ನಾಗರ ಪಂಚಮಿಯ ಈ ದಿನ ದಳವಾಯಿ ಕುಟುಂಬಿಕರೆಲ್ಲಾ ಅಲ್ಲಿ ಬಂದು ಸೇರುತ್ತಾರೆ. ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆಯುತ್ತವೆ.


Spread the love