
ನಾಗರಹೊಳೆಯಲ್ಲಿ ಹುಲಿ ದಾಳಿಗೆ ಯುವಕ ಬಲಿ
ಎಚ್.ಡಿ.ಕೋಟೆ: ಕಾಡಿಗೆ ಸೌದೆ ತರಲು ಹೋಗಿದ್ದ ಯುವಕನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದ ಘಟನೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕಾಡಿನ ಒಳಭಾಗದಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯದ ಬಳ್ಳೆ ಹಾಡಿ ನಿವಾಸಿ ಬಿ.ಕಾಳ ಎಂಬುವರ ಪುತ್ರ ಮಂಜು (18) ಎಂಬಾತನೇ ಹುಲಿದಾಳಿಗೆ ಬಲಿಯಾದ ದುರ್ದೈವಿ. ಈತ ಎಂದಿನಂತೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕಾಡಿಗೆ ಸೌದೆ ತರಲು ಹೋಗಿದ್ದನು. ಈ ಸಂದರ್ಭ ಆತನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದೆ.
ಸೌದೆ ತರಲು ಹೋದ ಮಂಜು ಮರಳಿ ಬಾರದೆ ಹೋದ ಹಿನ್ನಲೆಯಲ್ಲಿ ಹುಡುಕಾಟ ನಡೆಸಿದ ವೇಳೆ ಆತನ ಶವಪತ್ತೆಯಾಗಿದೆ. ಇದೀಗ ಶವವನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆಯ ಶವಾಗಾರದಲ್ಲಿಡಲಾಗಿದೆ, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಡಿವೈಎಸ್ ಪಿ ಮಹೇಶ್, ಉಪನೀರಿಕ್ಷಕ ತಮ್ಮೇಗೌಡ, ತಂಗರಾಜು, ಕಿರಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳ್ಳೆ ಗ್ರಾಮದಲ್ಲಿ ಮೃತ ವ್ಯಕ್ತಿಯ ಪೋಷಕರು ಹಾಗೂ ಹಾಡಿ ಜನರು ಪ್ರತಿಭಟನೆ ನಡೆಸಿದ ಪರಿಣಾಮ ಮೈಸೂರು ಮಾನಂದವಾಡಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಕೆಲ ಕಾಲ ಅಡಚಣೆವುಂಟಾಗಿತ್ತು. ಪ್ರತಿಭಟನೆ ನಿರತರನ್ನು ಮನವೊಲಿಸಲು ಡಿವೈಎಸ್ ಪಿ ತೆರಳಿದ್ದು,. ಇನ್ನೂ ಪ್ರಕರಣ ದಾಖಲಾಗದ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ, ದಾಳಿ ಮಾಡಿದ ಹುಲಿಯು ನಾಲ್ಕು ಮರಿಗಳ ತಾಯಿ ಬ್ಯಾಕ್ ವಾಟರ್ ಫೀಮೇಲ್ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಮೈಸೂರು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಮುಂದುವರೆದಿದ್ದು ಮೇಲಿಂದ ಮೇಲೆ ವನ್ಯಪ್ರಾಣಿಗಳ ದಾಳಿ ಮಾಡಿ ಮನುಷ್ಯನ ಬಲಿ ಪಡೆಯುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.