ನಾಗರೀಕರು ಪ್ರಾಣಿ, ಪರಿಸರ ರಕ್ಷಣೆಯ ರಾಯಭಾರಿಗಳಂತೆ ಕೆಲಸ ಮಾಡಬೇಕು: ಡಾ.ರಾಜೇಂದ್ರ ಕೆ.ವಿ

Spread the love

ನಾಗರೀಕರು ಪ್ರಾಣಿ, ಪರಿಸರ ರಕ್ಷಣೆಯ ರಾಯಭಾರಿಗಳಂತೆ ಕೆಲಸ ಮಾಡಬೇಕು: ಡಾ.ರಾಜೇಂದ್ರ ಕೆ.ವಿ

ಮಂಗಳೂರು: ಪ್ರತಿಯೊಬ್ಬ ನಾಗರೀಕರು ಪ್ರಾಣಿ ಹಾಗೂ ಪರಿಸರ ರಕ್ಷಣೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಪ್ರಾಣಿ ದಯಾ ಸಂಘ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಹಾಗೂ ಮಂಗಳೂರು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಜು.16ರ ಶನಿವಾರ ಹಮ್ಮಿಕೊಳ್ಳಲಾದ ಪ್ರಾಣಿ ರಕ್ಷಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ ವಿಕೋಪ ಸಂಭವಿಸಿದಾಗ ಸಂಕಷ್ಟಕ್ಕೆ ಸಿಲುಕಿದ ಮನುಷ್ಯರ ರಕ್ಷಣೆಗೆ ಎಲ್ಲರೂ ಮುಂದಾಗುತ್ತಾರೆ ಅದೇ ರೀತಿ ಸಂಕಷ್ಟಕ್ಕೆ ಸಿಲುಕುವ ಮೂಕ ಪ್ರಾಣಿಗಳ ರಕ್ಷಣೆಗೂ ಮುಂದಾಗಬೇಕು, ಆ ಮೂಲಕ ಎಲ್ಲರೂ ಪ್ರಾಣಿ ಹಾಗೂ ಪರಿಸರ ರಕ್ಷಣೆಯ ರಾಯಭಾರಿಗಳಾಗಬೇಕು ಎಂದು ಹೇಳಿದರು.

ಜಿಲ್ಲೆಯ ಪ್ರಾಣಿ ದಯಾ ಸಂಘದ ಸದಸ್ಯರು ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಪ್ರಾಣಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ, ಪ್ರಕೃತಿಯನ್ನು ನಾವು ನಾಶ ಮಾಡಿದಾಗ ಪ್ರಾಣಿಗಳು ಅನಿವಾರ್ಯವಾಗಿ ನಾಡಿಗೆ ಬರುತ್ತವೆ, ಆದ್ದರಿಂದ ಬುದ್ದಿವಂತ ಮಾನವರಾದ ನಾವು ಅವುಗಳನ್ನು ರಕ್ಷಿಸುತ್ತಾ ಸಮತೋಲನದ ಬದುಕನ್ನ ರೂಪಿಸಿಕೊಳ್ಳಬೇಕಿದೆ ಎಂದರು.

ಕಾಡುಪ್ರಾಣಿ, ಪಕ್ಷಿಗಳು ಹಾಗೂ ನೈಸರ್ಗಿಕ ಸಂಪತ್ತಿನ ಜವಾಬ್ದಾರಿಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ, ಕಾಡು ಪ್ರಾಣಿಗಳು ನಾಡಿಗೆ ಬಂದಾಗೆಲ್ಲ ಅವುಗಳ ಕಾಡು ನಮ್ಮಿಂದಲೇ ನಾಶವಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಸಾಕುಪ್ರಾಣಿಗಳೊಂದಿಗೆ ಕಾಡು ಪ್ರಾಣಿಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ, ಈ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಆ ಮೂಲಕ ಪ್ರತಿಯೊಬ್ಬರು ಪರಿಸರ ಮತ್ತು ಪ್ರಾಣಿ ರಕ್ಷಣೆಯ ರಾಯಭಾರಿಗಳಾಗಬೇಕು ಎಂದು ಹೇಳಿದರು.

ಪ್ರಾಣಿ, ಪಕ್ಷಿ, ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅತ್ಯಂತ ಸುಂದರವಾಗಿ ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಈ ರೀತಿಯ ಭಾವನೆ ಮೂಡಿದಾಗ ಈ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಪ್ರಸನ್ನ ಕುಮಾರ್, ಮುಖ್ಯ ಪಶುವೈದ್ಯ ಅಧಿಕಾರಿ ಡಾ. ವಸಂತಕುಮಾರ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ದಿನೇಶ್ ಪೈ, ಶಶಿಧರ್ ಶೆಟ್ಟಿ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.


Spread the love