ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ಕ್ರಮ : ಯಶ್ಪಾಲ್ ಸುವರ್ಣ

Spread the love

ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ಕ್ರಮ : ಯಶ್ಪಾಲ್ ಸುವರ್ಣ

ಉಡುಪಿ: ನಾಡ ದೋಣಿ ಮೀನುಗಾರಿಕೆ ಬಳಕೆಯ ಸೀಮೆ ಎಣ್ಣೆ ಅಸಮರ್ಪಕ ವಿತರಣೆಯಿಂದ ನಾಡ ದೋಣಿ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಿ ನಿರಂತರ ಸೀಮೆ ಎಣ್ಣೆ ಪೂರೈಕೆಗೆ ಸರಕಾರ ಕ್ರಮ ಕೈಗೊಂಡಿರುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ನಾಡದೋಣಿ ಮೀನುಗಾರಿಕೆ ಸೀಮೆ ಎಣ್ಣೆ ವಿತರಣೆಗೆ ಅನುದಾನ ಮಂಜೂರು ಮಾಡಿದೆ. ಇಂಧನ ಕಂಪೆನಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ಸೀಮೆ ಎಣ್ಣೆ ದಾಸ್ತಾನು ಕೊರತೆ ಉಂಟಾದ ಪರಿಣಾಮ ಸೀಮೆ ಎಣ್ಣೆ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ.

ನಾಡ ದೋಣಿ ಮೀನುಗಾರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಶನಿವಾರದಿಂದಲೇ ಕೈಗಾರಿಕಾ ಬಳಕೆಯ ಸೀಮೆ ಎಣ್ಣೆಯನ್ನು ಅವಶ್ಯಕತೆ ಇದ್ದಲ್ಲಿ ನಾಡ ದೋಣಿ ಮೀನುಗಾರರಿಗೆ ಮೀಸಲಿರಿಸುವ ಬಗ್ಗೆ ಪ್ರಕ್ರಿಯೆಗೆ ಮುಂದಾಗಿದೆ.

ಈಗಾಗಲೇ ಮೀನುಗಾರಿಕೆ ಬಳಕೆಯ ಸೀಮೆ ಎಣ್ಣೆ ಆಹಾರ ಸರಬರಾಜು ಇಲಾಖೆಯ ಮೂಲಕ ವಿತರಣೆಯಾಗುತ್ತಿದ್ದು ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸಮರ್ಪಕ ರೀತಿಯಲ್ಲಿ ವಿತರಣೆ ನಡೆಯುತ್ತಿಲ್ಲ. ಈಗಾಗಲೇ ರಾಜ್ಯ ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದು ಶೀಘ್ರದಲ್ಲಿಯೇ ನಾಡ ದೋಣಿ ಮೀನುಗಾರಿಕೆಗೆ ಸೀಮೆ ಎಣ್ಣೆಯನ್ನು ಮೀನುಗಾರಿಕೆ ಇಲಾಖೆಯ ಮೂಲಕ ವಿತರಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ.

ನಾಡ ದೋಣಿ ಮೀನುಗಾರರ ಸೀಮೆ ಎಣ್ಣೆ ಸಮರ್ಪಕ ವಿತರಣೆಗೆ ವಿಶೇಷ ಮುತುವರ್ಜಿ ವಹಿಸಿದ ಮುಖ್ಯ ಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಸಚಿವರಾದ ಶ್ರೀ ಎಸ್. ಅಂಗಾರ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಸಂಸದರಾದ ಶ್ರೀ ಬಿ ವೈ ರಾಘವೇಂದ್ರ, ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರಿಗೆ ನಾಡ ದೋಣಿ ಮೀನುಗಾರರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love