
ನಾಡಿಗೆ ಲಗ್ಗೆಯಿಟ್ಟ ಕಾಡಾನೆಗಳಿಂದ ರೈತರು ತತ್ತರ
ಮೈಸೂರು: ಸರಗೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗು ವನ್ಯಜೀವಿ ಧಾಮ ದಲ್ಲಿರುವ ಹೊಸಬಿರ್ವಾಳ್ ಗ್ರಾಮದ ಮುಳ್ಳೂರು ಬೆಟ್ಟದಿಂದ ಪಕ್ಕದ ಕಬ್ಬಿನ ತೋಟಕ್ಕೆ ಸುಮಾರು ಐದು ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯಧಿಕಾರಿಗಳು ಸಿಬ್ಬಂದಿ ಹೆಣಗಾಡುವಂತಾಗಿದೆ.
ಹೊಸಬಿರ್ವಾಳ್ ಮುಳ್ಳೂರು ಬೆಟ್ಟದಿಂದ ಬಂದ ಕಾಡಾನೆಗಳು ನೀರು ಕುಡಿಯುತ್ತಿದ್ದುದನ್ನು ಕಂಡ ಸಾರ್ವಜನಿಕರು ಭಯಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾದಾಗ ಹತ್ತಿರದ ಕಬ್ಬಿನ ತೋಟ ಹಾಗೂ ರಾಗಿ ಇತರ ಬೆಳೆಗಳನ್ನು ಪ್ರವೇಶಿಸಿ ಸಾಕಷ್ಟು ಕಬ್ಬನ್ನು ಬೆಳೆಗಳನ್ನು ಹಾಳು ಮಾಡಿವೆ. ಅಲ್ಲದೇ ಆನೆಗಳು ಜಮೀನಿನತ್ತ ಸುಳಿಯದಂತೆ ಹಿಮ್ಮೆಟ್ಟಿಸಲು ರೈತರು ಹರಸಾಹಸ ಪಟ್ಟರೂ ಅದು ವಿಫಲವಾಯಿತು. ಸದ್ಯ ಆನೆಗಳಿಂದ ಲಕ್ಷಾಂತರ ರೂ. ಬೆಳೆ ನಾಶವಾಗಿದೆ.
ಕಾಡಾನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಅಧಿಕಾರಿಗಳು ಗನ್ ಹಿಡಿದು, ಪಟಾಕಿಗಳನ್ನು ಸಿಡಿಸಿ ಓಡಿಸಲು ಪ್ರಯತ್ನಿಸಿದ್ದಾರೂ ಎರಡು ಭಾರಿ ಆನೆಗಳು ಗದ್ದೆಯಿಂದ ಹೊರ ಬಂದು ಹೋಗಲು ಯತ್ನಿಸಿದಾಗ ತಂಡೋಪ ತಂಡವಾಗಿ ಆನೆಗಳನ್ನು ನೋಡಲು ಬಂದ ಜನರ ಕಿರುಚಾಟದಿಂದ ಕಾಡಾನೆಗಳನ್ನು ಓಡಿಸುವ ಕಾರ್ಯಕ್ಕೆ ಅಡಚಣೆಯಾಯಿತು.
ನುಗು ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ನಿವೇದಿತಾ ಮಾತನಾಡಿ, ಕಾಡಾನೆಗಳು ಆಹಾರ ಹುಡುಕುತ್ತಾ ಮುಳ್ಳೂರು ಬೆಟ್ಟದಿಂದ ಹೊಸ ಬಿರ್ವಾಳು ಕಡೆ ಬಂದಿವೆ. ಇವುಗಳನ್ನು ಕಾಡಿಗೆ ಓಡಿಸಲು ನಾವು ಮತ್ತು ನಮ್ಮ ಸಿಬ್ಬಂದಿ ಸಾಕಷ್ಟು ಪಯತ್ನ ಮಾಡಿದ್ದೇವೆ, ಆದರೆ ಸಾಕಷ್ಟು ಪ್ರಮಾಣದಲ್ಲಿ ಆನೆಗಳನ್ನು ನೋಡಲು ಬಂದ ಜನರ ಚಿರಾಟದಿಂದ ಆನೆಗಳು ಕಾಡಿಗೆ ಹೋಗದೆ ಕಬ್ಬಿನ ತೋಟದಲ್ಲಿ ಬೀಡು ಬಿಟ್ಟಿವೆ. ರಾತ್ರಿ ಜನರ ಸಂಖ್ಯೆ ಕಡಿಮೆ ಆದ ನಂತರ ಕಾಡಾನೆಗಳನ್ನು ನುಗು ಜಲಾಶಯ ಬಳಿ ಗುಡ್ಡ ಹಾಗೂ ಓಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.