
ನಾನು ಲೋಕಾಯುಕ್ತ ಬಂದ್ ಮಾಡಿಲ್ಲ: ಸಿದ್ದರಾಮಯ್ಯ
ಮೈಸೂರು: ನಾನು ಲೋಕಾಯುಕ್ತ ಬಂದ್ ಮಾಡಿಲ್ಲ. ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುವುದಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಲೋಕಾಯುಕ್ತ ಮುಚ್ಚಿಸಿದರು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಭ್ರಷ್ಟಾಚಾರ ನಿಗ್ರಹಕ್ಕಾಗಿ ಎಸಿಬಿ ರಚಿಸಲಾಗಿತ್ತು. ಲೋಕಾಯುಕ್ತದ ಯಾವ ಅಧಿಕಾರವನ್ನು ಕಿತ್ತುಕೊಂಡಿಲ್ಲ. ಈ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಎಸಿಬಿ ರದ್ದು ಮಾಡಿದ್ದು ಬಿಜೆಪಿ ಸರ್ಕಾರವಲ್ಲ. ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯ ಎಂದರು.
ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ. ವಿರೂಪಾಕ್ಷಪ್ಪ ಎಲ್ಲಿದ್ದಾನೆಂದು ಸರ್ಕಾರಕ್ಕೆ ಗೊತ್ತಿದೆ. ಮನೆಯಲ್ಲೇ ಓಡಾಡಿಕೊಂಡಿದ್ದಾನೆ. ಅವನನ್ನು ಬಂಧಿಸದೇ ಇವರು ನಾಟಕ ಮಾಡುತ್ತಿದ್ದಾರೆ. ಲುಕ್ ಔಟ್ ನೋಟೀಸ್ ಜಾರಿ ಹೆಸರಿನಲ್ಲಿ ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಅಷ್ಟೇ. ಮಾಡಾಳ್ ವಿರೂಪಾಕ್ಷಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.
ದಶಪಥ ನಿರ್ಮಾಣದ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸೇರಬೇಕು. ಇದರಲ್ಲಿ ಸಂಸದ ಪ್ರತಾಪ್ ಸಿಂಹನದ್ದಾಗಲಿ, ಬಿಜೆಪಿ ಸರ್ಕಾರದ್ದಾಗಲಿ ಯಾವ ಪಾತ್ರವೂ ಇಲ್ಲ. ಪ್ರತಾಪ್ ಸಿಂಹ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೆಲವೇ ಕಿಲೋ ಮೀಟರ್ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದರಲ್ಲಿ ಪ್ರತಾಪ್ ಸಿಂಹನ ಪಾತ್ರ ಏನು ಇಲ್ಲ ಎಂದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಈ ರಸ್ತೆಯ ಎಲ್ಲ ಮಾಹಿತಿಯೂ ಗೊತ್ತಿದೆ. ಮಹದೇವಪ್ಪನೇ ಮುಂದೆ ನಿಂತು ಈ ರಸ್ತೆ ಮಾಡಿಸಿದ. ಆಗ ನಾನೂ ಇದ್ದೆ, ಆಗ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ದರು. ಅವರ ಕಾಲದ ಅನುಮೋದನೆ ದೊರೆಯಿತು ಈಗ ಆಸ್ಕರ್ ಫರ್ನಾಂಡೀಸ್ ಬದುಕಿಲ್ಲ. ಎಲ್ಲವೂ ಮಹದೇವಪ್ಪನ ಕಾಲದಲ್ಲಿ ಆಗಿದೆ. ದಶಪಥ ರಸ್ತೆ ನಮ್ಮ ಸರ್ಕಾರದ ಕೊಡುಗೆ ಎಂದು ಹೇಳಿದರು.