ನಾರಾಯಣ ಗುರುಗಳ ಸಂದೇಶದ ಆಶಯದೊಂದಿಗೆ ಯುವ ಪೀಳಿಗೆ ಮುಂದೆ ಸಾಗಲಿ – ಸತೀಶ್ ಕೋಟ್ಯಾನ್

Spread the love

ನಾರಾಯಣ ಗುರುಗಳ ಸಂದೇಶದ ಆಶಯದೊಂದಿಗೆ ಯುವ ಪೀಳಿಗೆ ಮುಂದೆ ಸಾಗಲಿ – ಸತೀಶ್ ಕೋಟ್ಯಾನ್

ಕುಂದಾಪುರ: ಸಂಘಟನೆಯಿಂದ ಬಲಯುತರಾಗಿ ಎನ್ನುವ ನಾರಾಯಣ ಗುರುಗಳ ಸಂದೇಶದ ಆಶಯದೊಂದಿಗೆ ನಮ್ಮ ಯುವಪೀಳಿಗೆ ಸಾಗಬೇಕು. ಎಲ್ಲರೂ ಕೈಜೋಡಿಸಿ ಸಂಘಟನೆ ಕಟ್ಟಿದರೆ ಮಾತ್ರ ನಾವು ಇನ್ನಷ್ಟು ಬಲಗೊಳ್ಳಲು ಸಾಧ್ಯವಿದೆ ಎಂದು ಉದ್ಯಮಿ ಸತೀಶ್ ಕೋಟ್ಯಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನದ ಪ್ರಯುಕ್ತ ಹೆಮ್ಮಾಡಿಯ ಸಂತೋಷನಗರದ ಬಳಿಯ ಬಿಲ್ಲವ ಸಂಘದ ವಠಾರದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮವನ್ನು ಉದ್ಥಾಟಿಸಿ ಮಾತನಾಡಿದರು.

ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ನಾರಾಯಣ ಗುರುಗಳು ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಮನುಕುಲದ ಮಹಾನ್ ಸಂತರು. ಸಂಘಟನೆಯ ಜೊತೆಗೆ ಶಿಕ್ಷಣಕ್ಕೂ ಹೆಚ್ಚು ಮಹತ್ವವನ್ನು ನೀಡಿದ ನಾರಾಯಣಗುರುಗಳ ಹೆಸರಲ್ಲಿ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ಆ ನಿಟ್ಟಿನಲ್ಲಿ ಈಗಾಗಲೇ ಹೆಮ್ಮಾಡಿಯಲ್ಲಿ ಬಿಲ್ಲವ ಸಂಘ ಹಾಗೂ ನಾರಾಯಣಗುರು ಶೈಕ್ಷಣಿಕ ದತ್ತಿ ಸಂಸ್ಥೆಗೆ ಸೇರಿದ ಈ ಸ್ಥಳದಲ್ಲಿ ಸರ್ಕಾರದ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆಯಾಗಲಿದೆ. ತನ್ಮೂಲಕ ಗ್ರಾಮೀಣ ಭಾಗದ ಎಲ್ಲಾ ಬಡ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಭದ್ರವಾಗಿ ನೆಲೆಯೂರಿದ್ದ ಕಾಲದಲ್ಲಿ ನಾರಾಯಣಗುರುಗಳು ಬಾಲ್ಯವಿವಾಹ, ಮೂಢನಂಬಿಕೆ, ಅಸ್ಪøಶ್ಯತೆಯ ವಿರುದ್ದ ಹೋರಾಟ ನಡೆಸಿದವರು. ತಮ್ಮ ಅಪಾರ ಅನುಯಾಯಿಗಳ ಜೊತೆಗೆ ದೇವಾಲಯವನ್ನು ನಿರ್ಮಿಸಿ ಹಿಂದುಳಿದವರೂ ಕೂಡ ಪೂಜೆಯಲ್ಲಿ ಪಾಳ್ಗೊಳ್ಳಬಹುದು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದವರು. ಈ ಸಮಯದಲ್ಲಿ ತಮಗೆ ತೊಂದರೆಗಳಾದರೂ ಶಾಂತಿ ಮಂತ್ರದಿಂದ ಹಿಂದುಳಿದ ಸಮಾಜವನ್ನು ಕಟ್ಟುವಂತಹ ಕೆಲಸ ಮಾಡಿದ್ದಾರೆ. ನಾರಾಯಣಗುರುಗಳ ಸಮಾಜ ಸುಧಾರಣೆಯನ್ನು ನೋಡಿ ಮಹಾತ್ಮ ಗಾಂಧಿ, ರವೀಂದ್ರನಾಥ್ ಠಾಗೋರ್, ವಿನೋದಭಾವೆ, ರಾಜಗೋಪಾಲಾಚಾರ್ಯರಂತಹ ಮಹಾನ್ ನಾಯಕರು ನಾರಾಯಣಗುರುಗಳನ್ನು ಹೊಗಳಿ ವ್ಯಾಖ್ಯಾನಿಸಿದ್ದರು ಎಂದರು.

ಮುಖ್ಯ ಅತಿಥಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಮ ಪೂಜಾರಿ, ನಾರಾಯಣಗುರು ಶೈಕ್ಷಣಿಕ & ಸಾಂಸ್ಕøತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ವಿಠಲವಾಡಿ, ಕೋಶಾಧಿಕಾರಿ ಶಿವಾನಂದ ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ಆನಂದ ಪೂಜಾರಿ ಕೊಡೇರಿ, ಜನಾರ್ದನ ಪೂಜಾರಿ ಹೆಮ್ಮಾಡಿ, ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‍ಕಟ್ಟೆ, ಕಟ್‍ಬೇಲ್ತೂರು ಗ್ರಾ.ಪಂ ಸದಸ್ಯೆ ಜ್ಯೋತಿ ಪೂಜಾರಿ ಮೊದಲಾದವರು ಇದ್ದರು.

ಗುರುವಂದನಾ ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹೆಮ್ಮಾಡಿಯಲ್ಲಿ ಬಿಲ್ಲವ ಸಂಘದ ಶಿಕ್ಷಣ ಸಂಸ್ಥೆಗೆ ಕಾದಿರಿಸಿದ ಸ್ಥಳದವರೆಗೂ ಬೃಹತ್ ವಾಹನ ಜಾಥಾ ನಡೆಯಿತು. ವಾಹನ ಜಾಥಾಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಚಾಲನೆ ನೀಡಿ ಶುಭಹಾರೈಸಿದರು.

ಬಿಲ್ಲವ ಸಂಘದ ಸಹಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ಗಂಗನಹಿತ್ಲು ವಂದಿಸಿದರು.


Spread the love

Leave a Reply

Please enter your comment!
Please enter your name here