ನಾಳೆಯಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆಗೆ ಅವಕಾಶ ನೀಡಿ ಸರಕಾರ ಆದೇಶ

Spread the love

ನಾಳೆಯಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆಗೆ ಅವಕಾಶ ನೀಡಿ ಸರಕಾರ ಆದೇಶ

ಬೆಂಗಳೂರು: ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಲ್ಲಿ ಭಾನುವಾರದಿಂದ ಭಕ್ತರು ಸೇವೆ ಸಲ್ಲಿಸುವುದಕ್ಕೆ ಅನುಮತಿ ನೀಡಿ ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಕೋವಿಡ್ ಲಾಕ್‌ಡೌನ್ ಜಾರಿಯಾದ ಬಳಿಕ ಧಾರ್ಮಿಕ ಸ್ಥಳಗಳಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ದರ್ಶನಕ್ಕೆ ಸೀಮಿತಗೊಳಿಸಿ ಜುಲೈ ಮೊದಲ ವಾರ ಆದೇಶ ಹೊರಡಿಸಲಾಗಿತ್ತು. ಆದರೆ, ಯಾವುದೇ ರೀತಿಯ ಪೂಜೆ ಅಥವಾ ಸೇವೆ ಸಲ್ಲಿಸಲು ಅವಕಾಶ ಇರಲಿಲ್ಲ.

ಶನಿವಾರ ಹೊಸ ಆದೇಶ ಹೊರಡಿಸಿರುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ‘ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಭಾನುವಾರದಿಂದ ಧಾರ್ಮಿ ಸ್ಥಳಗಳಲ್ಲಿ ಸೇವೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಜಾತ್ರೆ, ದೇವಸ್ಥಾನದ ಹಬ್ಬಗಳು, ಮೆರವಣಿಗೆ ಮತ್ತು ಸಮಾವೇಶಗಳಿಗೆ ಅನುಮತಿ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮನರಂಜನಾ ಪಾರ್ಕ್ ತೆರೆಯಲು ಅನುಮತಿ: ರಾಜ್ಯದಾದ್ಯಂತ ಮನರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಜಲ ಕ್ರೀಡೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Spread the love