ನಾಳೆ ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ್ ಅಂತ್ಯಕ್ರಿಯೆ

Spread the love

ನಾಳೆ ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ್ ಅಂತ್ಯಕ್ರಿಯೆ

ಮೈಸೂರು: ಸರಳ, ಸಜ್ಜನಿಕೆಯ ರಾಜಕಾರಣಿ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ (61) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು, ಹಳೇ ಮೈಸೂರು ಭಾಗದ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಅವರ ಅಂತ್ಯಕ್ರಿಯೆ ಭಾನುವಾರ ಹುಟ್ಟೂರಾದ ಚಾಮರಾಜನಗರದ ಹೆಗ್ಗವಾಡಿಯಲ್ಲಿ ನಡೆದಿದೆ.

ಮೈಸೂರಿನ ವಿಜಯನಗರದ ನಿವಾಸದಲ್ಲಿ ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ  ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಧ್ರುವನಾಯಣ ಅವರು ಪತ್ನಿ ವೀಣಾ ಮತ್ತು ಮಕ್ಕಳಾದ ದರ್ಶನ್ ಹಾಗೂ ಧೀರೇನ್ ಅವರನ್ನು ಅಗಲಿದ್ದಾರೆ.

ಚಾಮರಾಜನಗರ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಎರಡು ಬಾರಿ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್  ಅವರ ಎದುರು  ಸೋಲು ಕಂಡಿದ್ದ ಅವರು, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಚುನಾವಣೆ ಹೊಸ್ತಿಲಲ್ಲಿ ಅವರ ಅಕಾಲಿಕ ನಿಧನ ಕಾಂಗ್ರೆಸ್‌ಗೆ ಅಪಾರ ನಷ್ಟವುಂಟುಮಾಡಿದೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯಲ್ಲಿ 1961ರ ಆಗಸ್ಟ್ 31ರಂದು ಜನಿಸಿದ್ದರು. ಪತ್ನಿ, ಇಬ್ಬರು ಪುತ್ರರು ಅವರಿಗಿದ್ದಾರೆ. ಎಂ.ರಾಜಶೇಖರಮೂರ್ತಿಯವರ ಶಿಷ್ಯರಾಗಿರುವ  ಅವರು 1999ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಬಂದಿದ್ದರು. 1999ರಲ್ಲಿ ಅವರು ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು. ಆ ಬಳಿಕ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕೈ ಪಾಳಯಕ್ಕೆ ಬಂದ ನಂತರ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರುತ್ತಾ ಹೋದರು.

ಚಾಮರಾಜನಗರದ ಸಂಸದರಾಗಿ ಎರಡು ಬಾರಿ, ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ತಲಾ ಒಂದು ಬಾರಿ ಆಯ್ಕೆಯಾಗಿದ್ದ ಧ್ರುವನಾರಾಯಣ ಸರಳ, ಸಜ್ಜನಿಕೆಗೆ ಹೆಸರಾಗಿದ್ದರು. ತಮ್ಮ ಕಾರ್ಯವೈಖರಿಯ ಮೂಲಕವೇ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಾಯಕ ಯೋಗಿ ಎಂದೇ ಗುರುತಿಸಿಕೊಂಡಿದ್ದವರು. ಮೂರು ಬಾರಿ ವಿಧಾನಸಭೆಗೆ, ಮೂರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆದ್ದಿದ್ದರೆ, ಇನ್ನೆರಡು ಬಾರಿ ಸೋತಿದ್ದರು.

2009ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷ ಧ್ರುವನಾರಾಯಣ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ವಿರುದ್ಧ 4,002 ಮತಗಳ ಅಂತರದಿAದ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋದರು. ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕ್ಷೇತ್ರದಾದ್ಯಂತ ಉತ್ತಮ ಸಂಸದ ಎಂದು ಮನೆಮಾತಾಗಿದ್ದ ಅವರು, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅವರ ಎರಡು ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿದ್ದವು.2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ 1,817 ಮತಗಳ ಅಂತರದಲ್ಲಿ ಸೋತು, ನಿರಾಸೆ ಅನುಭವಿಸಿದ್ದರು.

ತಮ್ಮ ಸಾರ್ವಜನಿಕ ಜೀವನದಲ್ಲಿ ಎಲ್ಲೂ ಎಡವದೇ ಇದ್ದ ಧ್ರುವನಾರಾಯಣ ಯಾವುದೇ ಕಪ್ಪು ಚುಕ್ಕೆ ಹೊಂದಿರಲಿಲ್ಲ. ಕ್ಷೇತ್ರದ ಜನರ ಸಂಪರ್ಕಕ್ಕೆ ಸದಾ ಸಿಗುವ ಧ್ರುವನಾರಾಯಣ ಅವರಿಗೆ ಎದುರಾಳಿ ಪಕ್ಷಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು. ಚಾಮರಾಜನಗರದಲ್ಲಿ ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡದ ಉದ್ಘಾಟನೆಗೆ ಬಂದಿದ್ದ ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರು, ಧ್ರುವನಾರಾಯಣ ಅವರು ನನ್ನ ಮೆಚ್ಚಿನ ಸಂಸದರಲ್ಲಿ ಒಬ್ಬರು ಎಂದು ಶ್ಲಾಘಿಸಿದ್ದರು. ರಾಜಕಾರಣದ ಎಲ್ಲ ಪಟ್ಟುಗಳನ್ನು ಅರಿತಿದ್ದ ಅವರು, ಚಾಣಾಕ್ಷ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಜನಜನಿತರಾಗಿದ್ದರು.

ಶ್ರೀನಿವಾಸ ಪ್ರಸಾದ್ ನಂತರ ಮೈಸೂರು ಭಾಗದ ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಹೊರಹೊಮ್ಮುತ್ತಾ ಬಂದಿದ್ದರು. ಕಳೆದ ಲೋಕಸಭಾ ಚುನಾವಣೆ ಸೋಲು ಅವರಿಗೆ ಕೊಂಚ ಹಿನ್ನಡೆ ತಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮತ್ತೆ ಈ ಭಾಗದಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದರು. ಆದರೆ, ಧ್ರುವನಾರಾಯಣ ಅವರ ಹಠಾತ್ ಸಾವು, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಆಘಾತ ಉಂಟಾಗಿದೆ.

ತಮ್ಮ ನೆಚ್ಚಿನ ನಾಯಕನ ಅಗಲಿಕೆಯ ಸುದ್ದಿ ತಿಳಿಯುತಿದ್ದಂತೆ ಧ್ರುವನಾರಾಯಣ್ ಅವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು. ಆಸ್ಪತ್ರೆಯಿಂದ ಪಾರ್ಥೀವ ಶರೀರವನ್ನು ವಿಜಯನಗರದ ನಿವಾಸಕ್ಕೆ ತರಲಾಯಿತು. ಧ್ರುವನಾರಾಯಣ್ ಪತ್ನಿ ಹಾಗೂ ಪುತ್ರರು ಪೂಜೆ ಸಲ್ಲಿಸಿದ ನಂತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಯಿತು. ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು. ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದರಿAದ ಪೊಲೀಸರು ಸಾರ್ವಜನಿಕರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಧ್ರುವನಾರಾಯಣ್ ಅವರ ಪಾರ್ಥೀವ ಶರೀರವನ್ನು ವಿಜಯನಗರದ ಅವರ ನಿವಾಸದಲ್ಲಿ ಶನಿವಾರ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಅಲ್ಲಿಂದ ರೈಲು ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿಗೆ ತಂದು ಅಲ್ಲಿ ಧ್ವಜವಂದನೆ ಸಲ್ಲಿಸಿ ಸಾರ್ವಜನಿಕರ ದರ್ಶನಕ್ಕಿಡಲಾಗಿತ್ತು. ನಂತರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ನಂಜನಗೂಡಿನ ಹುಲ್ಲಹಳ್ಳಿ ಸರ್ಕಲ್‌ನಿಂದ ಆರ್‌ಪಿ ರಸ್ತೆವರೆಗೆ ಮೆರವಣಿಗೆ ನಡೆಸಿ ಚಾಮರಾಜನಗರಕ್ಕೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿನ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿ ಬಳಿಕ ಹುಟ್ಟೂರು ಹೆಗ್ಗವಾಡಿಗೆ ತೆಗೆದುಕೊಂಡು ಹೋಗಲಾಯಿತು. ಶನಿವಾರ ರಾತ್ರಿಯಿಡೀ ಹಾಗೂ ಭಾನುವಾರ ಬೆಳಗ್ಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಧ್ಯಾಹ್ನ 2 ಗಂಟೆಗೆ ಹೆಗ್ಗವಾಡಿ ಜಮೀನಿನಲ್ಲಿ, ಧ್ರುವನಾರಾಯಣ್ ಅವರ ತಂದೆ-ಯಿ ಸಮಾಧಿ ಬಳಿಯೇ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love

Leave a Reply

Please enter your comment!
Please enter your name here