ನಾಳೆ (ನ. 24) ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಕಾಂತಾರ!

Spread the love

ನಾಳೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಕಾಂತಾರ!
 

ಬೆಂಗಳೂರು: ಹೊಂಬಾಳೆ ಫಿಲ್ಮ್​ ನಿರ್ಮಾಣದ ರಿಷಬ್ ಶೆಟ್ಟಿ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ, ದೇಶದ ಚಿತ್ರರಂಗದಲ್ಲೇ ಭಾರಿ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ಅದರ ಹೊರತಾಗಿಯೂ ಹಲವು ರೀತಿಯಲ್ಲಿ ಪರಿಣಾಮ ಬೀರಿತ್ತು.ಇದೀಗ ಕಾಂತಾರ ಒಟಿಟಿಗೂ ಲಗ್ಗೆ ಇಡಲಿದೆ.

ದೈವಾರಾಧನೆ, ಭೂತಕೋಲಗಳನ್ನೇ ಪ್ರಮುಖ ಕಥಾಹಂದರವಾಗಿ ಹೊಂದಿರುವ ‘ಕಾಂತಾರ’ ಸಿನಿಮಾದಲ್ಲಿ ಕಥಾನಾಯಕನೇ ದೈವನರ್ತಕ. ಇಂಥದ್ದೊಂದು ಕಥೆ ಹೊಂದಿರುವ ಕಾಂತಾರ ಐಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್ ಹೊಂದಿರುವ ಭಾರತೀಯ ಸಿನಿಮಾ ಆಗಿ ಹೊರಹೊಮ್ಮಿದ್ದಲ್ಲದೆ ಇದುವರೆಗೆ ಆಗಿರದ ಹಲವು ಪ್ರಥಮಗಳಿಗೆ ನಾಂದಿ ಹಾಡಿ ದಾಖಲೆ ಮೇಲೆ ದಾಖಲೆಗಳನ್ನು ಬರೆದಿದೆ.

ಇಂತಹ ಐತಿಹಾಸಿಕ ಸಿನಿಮಾ ನಾಳೆ ಅಮೇಜಾನ್​ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಇದರಿಂದ ಜಗತ್ತಿನಾದ್ಯಂತ ಈ ಸಿನಿಮಾ ನೋಡಲು ಕಾತುರರಾಗಿದ್ದ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಮೇಜಾನ್​ ಪ್ರೈಂ ‘ಎಲ್ಲರ ಕಾಯುವಿಕೆ ಈಗ ಕೊನೆಯಾಗಿದೆ’ ಟ್ವೀಟ್​ ಮಾಡಿದ್ದು ಇದನ್ನು ರಿಷಭ್ ಶೆಟ್ಟಿ ಕೂಡ ರೀಟ್ವೀಟ್​ ಮಾಡಿದ್ದಾರೆ. ನ. 24ರಂದು ಅಮೆಜಾನ್‌ ಪ್ರೈಂ ಒಟಿಟಿ ವೇದಿಕೆಯಲ್ಲಿ ವಿಶೇಷ ಪ್ರೀಮಿಯರ್‌ ಸ್ಟ್ರೀಮಿಂಗ್‌ ನಡೆಯಲಿದೆ.

ರಿಷಬ್‌ ಶೆಟ್ಟಿ ರಚನೆ, ನಟನೆ ಮತ್ತು ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್‌ 30ರಂದು ತೆರೆ ಕಂಡಿತ್ತು. ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡವೊಂದರಲ್ಲೇ ಒಂದು ಕೋಟಿಗೂ ಮಿಕ್ಕಿ ಟಿಕೆಟ್‌ಗಳು ಮಾರಾಟವಾಗಿದ್ದವು.

ಸಪ್ತಮಿ ಗೌಡ, ರಘು ಪಾಂಡೇಶ್ವರ, ಪ್ರಕಾಶ್‌ ತೂಮಿನಾಡು, ಅಚ್ಯುತ್ ಕುಮಾರ್ ಮುಂತಾದ ಪ್ರಮುಖರು ತಾರಾಗಣದಲ್ಲಿದ್ದಾರೆ.

ಅಮೆಜಾನ್‌ ಪ್ರೈಮ್‌ ಮೂಲಕ ಭಾರತ ಸೇರಿದಂತೆ 240 ದೇಶ, ಪ್ರಾಂತ್ಯಗಳಲ್ಲಿನ ಪ್ರೈಂ ಚಂದಾದಾರರು ಚಿತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಆವೃತ್ತಿಗಳೂ ಲಭ್ಯ ಇವೆ ಎಂದು ಅಮೆಜಾನ್‌ ಪ್ರಕಟಣೆಯಲ್ಲಿ ಹೇಳಿದೆ.


Spread the love

Leave a Reply

Please enter your comment!
Please enter your name here