
ನಾವು ಎಲೆಕ್ಷನ್ ಹಿಂದೂಗಳಲ್ಲ, ಪರ್ಮನೆಂಟ್ ಹಿಂದೂಗಳು: ಕಾಂಗ್ರೆಸ್ ವಿರುದ್ದ ಸಿ.ಟಿ ರವಿ ಟೀಕಾಪ್ರಹಾರ
ಕುಂದಾಪುರ: ಕೆಲವರಿಗೆ ಅಧಿಕಾರದಲ್ಲಿದ್ದಾಗ ಕುಂಕುಮ ಕಂಡರೆ ಅಲರ್ಜಿಯಾಗುತ್ತದೆ. ನಾವು ಸಿಂಧೂರ ಗೌರವದ ಪ್ರತೀಕ ಎಂದು ಭಾವಿಸಿ ಅದಕ್ಕಾಗಿ ಜೀವವನ್ನು ಕೊಡುವವರು. ಕೇಸರಿಯನ್ನು ಕೇವಲ ಕೊರಳಲ್ಲಿ ಮಾತ್ರ ಹಾಕುವವರಲ್ಲ. ಹೃದಯದಲ್ಲಿಟ್ಟುಕೊಂಡವರು ನಾವು. ಹಿಂದೂತ್ವಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ದ. ಕಾಂಗ್ರೆಸ್ನಂತೆ ನಾವು ಎಲೆಕ್ಷನ್ ಹಿಂದೂಗಳಲ್ಲ. ಪರ್ಮನೆಂಟ್ ಹಿಂದೂಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ವಿರುದ್ದ ಹರಿಹಾಯ್ದರು.
ಇಲ್ಲಿನ ಮುಳ್ಳಿಕಟ್ಟೆ ಸಮೀಪದ ನಗುಸಿಟಿಯಲ್ಲಿ ಸೋಮವಾರ ಬಿಜೆಪಿ ಬೈಂದೂರು ಮಂಡಲ ಆಯೋಜಿಸಿದ ಬಿಜೆಪಿಯೇ ಭರಸವೆ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ನಾನು ಹಿಂದೂ. ಹಿಂದೂತ್ವವಾದಿ ಅಲ್ಲ. ಹಿಂದೂತ್ವವಾದಿಗಳೆಲ್ಲರೂ ಭಯೋತ್ಪಾದಕರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹಿಂದೂ ಎಂದರೆ ದೇಹ. ಹಿಂದೂತ್ವ ಎಂದರೆ ಆತ್ಮ ಅಥವಾ ಜೀವ. ದೇಹಕ್ಕೆ ಜೀವ ಇದ್ದರೆ ಮಾತ್ರ ಬೆಲೆ. ನಿಮಗೆ ದೇಹ ಮಾತ್ರ ಇದೆ. ಜೀವ ಇಲ್ಲ. ದೇಹದಿಂದ ಜೀವ ಹೋದರೆ ಯಾರೂ ಕೂಡ ಮೂರುಕಾಸಿನ ಬೆಲೆ ಕೊಡೋದಿಲ್ಲ. ಹೆಚ್ಚು ದಿನವೂ ಇಟ್ಟುಕೊಳ್ಳುವುದಿಲ್ಲ. ಸ್ಮಾಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಕಾಂಗ್ರೆಸ್ ಕೂಡ ಊರಿನೊಳಗೆ ಇಟ್ಟುಕೊಳ್ಳಲು ಯೋಗ್ಯವಾಗಿರುವ ಪಕ್ಷ ಅಲ್ಲ. ಕಾಂಗ್ರೆಸ್ ಅನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕು ಎಂದರು.
ಈಗಿರುವುದು ಸ್ವತಂತ್ರಪೂರ್ವದ ಕಾಂಗ್ರೆಸ್ ಅಲ್ಲ. ಇದು ಇಟೆಲಿಯ ಕಾಂಗ್ರೆಸ್. ಚೀನಾದೊಂದಿಗೆ ಸಂಬಂಧ ಇಟ್ಟುಕೊಂಡು ದೇಶದ ವಿರುದ್ದ ಕೆಲಸ ಮಾಡುವ, ಭಾರತವನ್ನು ದುರ್ಬಲಗೊಳಿಸುವ ಸಂಚು ರೂಪಿಸುತ್ತಿರುವ ಕಾಂಗ್ರೆಸ್. ಅವರದೆ ಪಕ್ಷದ ದಲಿತ ಶಾಸಕರ ಮನೆಗೆ ಬೆಂಕಿ ಹಾಕಿರುವ ಪ್ರಕರಣವನ್ನು ಖಂಡಿಸುವ ಯೋಗ್ಯತೆಯೂ ಸಿದ್ದರಾಮಯ್ಯನವರಿಗಿರಲಿಲ್ಲ. ಇದನ್ನೆಲ್ಲಾ ಗಮನಿಸಿದರೆ ಸಿದ್ದರಾಮಯ್ಯನವರ ಹುಟ್ಟಿಗೆ ಬೆಲೆ ಇದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸಿಟಿ ರವಿ ವಾಕ್ ಪ್ರಹಾರವನ್ನೇ ನಡೆಸಿದರು.
ಯಾರಾದರೂ ಕಾಂಗ್ರೆಸ್ನವರು ಬೈಂದೂರನ್ನು ಗೆಲ್ಲಬಹುದು ಎನ್ನುವ ಪಟ್ಟಿ ಕೈಯ್ಯಲ್ಲಿಟ್ಟುಕೊಂಡರೆ ಇವತ್ತೇ ನಿಮ್ಮ ಪಟ್ಟಿಯನ್ನು ಕೈಬಿಟ್ಟುಬಿಡಿ. ಬೈಂದೂರು ಬಿಜೆಪಿಯ ಭದ್ರ ಕೋಟೆ. ಇಲ್ಲಿ ಕಮಲದ ಹೊರತಾಗಿ ಇನ್ಯಾವುದೇ ಪಕ್ಷಕ್ಕೆ ಮತ ಹಾಕುವುದಕ್ಕೆ ಜನರು ಸಿದ್ದರಿಲ್ಲ ಎನ್ನುವುದನ್ನು ಈ ಸಮಾವೇಶ ತೋರಿಸಿಕೊಟ್ಟಿದೆ. ಈ ಚುನಾವಣೆ ಅಭಿವೃದ್ದಿ ಹಾಗೂ ಹಿಂದೂತ್ವದ ನಡುವಿನ ಚುನಾವಣೆ. ಅಭಿವೃದ್ದಿಯ ವಿಚಾರಕ್ಕೆ ಬಂದರೂ ನಾವು ಸವಾಲು ಹಾಕುತ್ತೇವೆ. ಐದು ವರ್ಷದಲ್ಲಿ ಬೈಂದೂರಿನ ಅಭಿವೃದ್ದಿಗೆ ಬಿಜೆಪಿ ಕೊಟ್ಟಿರುವ ಹಣ ಕಾಂಗ್ರೆಸ್ 50 ವರ್ಷದಲ್ಲೂ ಕೊಟ್ಟಿಲ್ಲ. ಕೇವಲ ಬೈಂದೂರು ಮಾತ್ರವಲ್ಲ ರಾಜ್ಯದಲ್ಲೇ ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿಗೆ ಕೊಟ್ಟ ಆದ್ಯತೆಯನ್ನು ಬೇರಾವುದೇ ರಾಜಕೀಯ ಪಕ್ಷಗಳು ಕೊಟ್ಟಿಲ್ಲ. ಅಂಕಿ ಅಂಶಗಳ ಸಮೇತವಾಗಿ ನಾವು ಹೇಳಲು ಸಿದ್ದರಿದ್ದೇವೆ ಎಂದರು.