
ನಿಖಿಲ್ ಕುಮಾರಸ್ವಾಮಿಗೆ ಸೋಲಿನ ಸುಳಿವು ಸಿಕ್ಕಿದೆ
ರಾಮನಗರ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ಸೋಲಿನ ಸುಳಿವು ಸಿಕ್ಕಿದ್ದಾಗಿದೆ. ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವಂತೆ ನಿಖಿಲ್ ರವರು ತಮ್ಮ ಸೋಲಿಗೆ ಕಾರಣ ಹೇಳುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ 4ನೇ ವಾರ್ಡ್ ವ್ಯಾಪ್ತಿಯ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್‌ಗೌಡ ಪರವಾಗಿ ಮತಯಾಚಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾಳೆ ದಿನ ಸೋಲಿಗೆ ಸಬೂಬು ಹೇಳಬೇಕಾಗಿರುವ ಕಾರಣ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ- ಕಾಂಗ್ರೆಸ್ ನಡುವೆ ಹೊಂದಾಣಿಕೆ ನಡೆದಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ನಿಖಿಲ್‌ಗೆ ಸೋಲಿನ ಭೀತಿ ಶುರುವಾಗಿದೆ. ಜೆಡಿಎಸ್ ನವರಿಗೂ ಗೌತಮ್ ಗೌಡ ಗೆಲ್ಲುತ್ತಾರೆಂದು ಗೊತ್ತಾಗಿದೆ. ಹೀಗಾಗಿ ಆರೋಪಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿಕೊಳ್ಳುವಂತೆ ನಿಖಿಲ್ ರವರು ಬಿಜೆಪಿ- ಕಾಂಗ್ರೆಸ್ ಮೇಲೆ ಹೊಂದಾಣಿಕೆ ಆರೋಪ ಮಾಡಿದ್ದಾರೆಂದು ಟೀಕಿಸಿದರು.
ನಿಖಿಲ್ ಕುಮಾರಸ್ವಾಮಿರವರು ಈ ಮೊದಲು ಬಿಜೆಪಿಯವರು ಕಾಂಗ್ರೆಸ್ ಬೆಂಬಲಿಸುವ ಪರಿಸ್ಥಿತಿಯಲ್ಲಿದ್ದಾರೆಂದು ಹೇಳಿದ್ದರು. ಈಗ ಕಾಂಗ್ರೆಸ್‌ನವರೇ ಬಿಜೆಪಿ ಅನ್ನು ಬೆಂಬಲಿಸುತ್ತಿದ್ದಾರೆಂದು ಉಲ್ಟಾ ಹೊಡೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳಒಪ್ಪಂದ ನಡೆದಿದೆ. ಈ ಹಿಂದೆಯೂ ಇದು ಸಾಬೀತಾಗಿದೆ. ಕಾಂಗ್ರೆಸ್ ಬಹುಮತ ಪಡೆಯದಿದ್ದರೆ ಜೆಡಿಎಸ್ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡುವ ಆಲೋಚನೆ ಮಾಡಿಕೊಂಡಿವೆ. ಆ ಎರಡು ಪಕ್ಷಗಳ ನಾಯಕರ ನಡವಳಿಕೆ ಮತ್ತು ಮಾತುಗಳು ಅದೇ ರೀತಿಯಲ್ಲಿವೆ ಎಂದು ವಾಗ್ದಾಳಿ ನಡೆಸಿದರು.
ನನಗೆ ತಿಳಿದಂತೆ ಕಾಂಗ್ರೆಸ್‌ನವರು ಬಿಜೆಪಿಗೆ ಅಥವಾ ಬಿಜೆಪಿಯವರು ಕಾಂಗ್ರೆಸ್ಸಿಗೆ ಬೆಂಬಲಿಸುವ ಕೆಲಸ ಈ ದೇಶದಲ್ಲಿ ನಡೆಯುವುದಿಲ್ಲ. ಆದರೆ, ಜೆಡಿಎಸ್ ಪಕ್ಷನವರು ಎಲ್ಲಿ ಬೇಕಾದರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರಿಗೇನು 130 ಸ್ಥಾನ ಗೆದ್ದು ಅಧಿಕಾರ ನಡೆಸಬೇಕೆನ್ನುವ ಕಮೀಟ್‌ಮೆಂಟ್ ಇಲ್ಲ. 25ಸ್ಥಾನ ಗೆದ್ದರೂ ನಾವೇ ರಾಜ್ಯ ಆಳುವವರು ಅನ್ನುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಸ್ಥಾನಗಳು ಕಡಿಮೆ ಆಗಬೇಕು. ಅದರ ಲಾಭ ಪಡೆದು ಅಧಿಕಾರ ನಡೆಸಬೇಕೆನ್ನುವುದು ಜೆಡಿಎಸ್ ಬಯಕೆ ಆಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಆ ಪಕ್ಷದ ನಾಯಕರಿಗೆ ಖಾತ್ರಿಯಾಗಿದ್ದು, ಬಿಜೆಪಿ ಸರ್ಕಾರ ಬರುವುದನ್ನು ತಿಳಿದು ವಿಚಲಿತರಾಗಿದ್ದಾರೆ. ಹಾಗಾಗಿಯೇ ಆ ಪಕ್ಷದ ನಾಯಕರು ಪ್ರಧಾನಿ ಮೋದಿ ಅವರನ್ನು ವಿಷಸರ್ಪ, ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಶಕುನಿ ಅಂತೆಲ್ಲ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮತಯಾಚನೆಯಲ್ಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಮಂಡಲ ಅಧ್ಯಕ್ಷ ಪಿ.ಶಿವಾನಂದ, ಮುಖಂಡರಾದ ಸುರೇಶ್, ನಾಗೇಶ್, ವಿ.ರಾಜು, ಚಂದ್ರಶೇಖರ್ ರೆಡ್ಡಿ, ಜಯಶೀಲಾ, ಸವಿತಾ, ನಾಗಮ್ಮ, ಸವಿತಾ ಬಾಲಿ, ಹೇಮಾ ಮತ್ತಿತರರು ಇದ್ದರು.