
ನಿಮಗೆ ವ್ಯಾಲೆಂಟೈನ್ ಡೇ ಇತಿಹಾಸ ಗೊತ್ತಾ?
ಇವತ್ತು ಜಗತ್ತಿನೆಲ್ಲಡೆ ಫೆ.14ರಂದು ವ್ಯಾಲೆಂಟೈನ್ ಡೇ ಯನ್ನು ಪ್ರೇಮಿಗಳು ಆಚರಿಸುತ್ತಿದ್ದಾರೆ. ತಾವಿಷ್ಟ ಪಡುವ ಜೀವಗಳೊಂದಿಗೆ ಒಂದಷ್ಟು ಸಮಯ ಕಳೆದು ಉಡುಗೊರೆ ನೀಡಿ, ಸಿನಿಮಾ, ಪಾರ್ಕ್ ಅಂಥ ಸುತ್ತಾಡಿ ಖುಷಿಯಾಗಿ ಕಾಲ ಕಳೆಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ವ್ಯಾಲೆಂಟೈನ್ ಡೇ ಇವತ್ತು ನಿನ್ನೆಯ ಆಚರಣೆಯಲ್ಲ. ಅದಕ್ಕೆ ಹಲವು ಶತಮಾನಗಳ ಇತಿಹಾಸವಿದ್ದು, ಅದನ್ನು ತಿರುವಿ ನೋಡಿದರೆ ವ್ಯಾಲೆಂಟೈನ್ ಡೇ ಬಗೆಗಿನ ಇತಿಹಾಸ ನಮಗೆ ಗೊತ್ತಾಗುತ್ತದೆ. ಇನ್ನು ಪ್ರೇಮಿಗಳ ದಿನ ಅರ್ಥಾತ್ ವ್ಯಾಲೆಂಟೈನ್ ಡೇ ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಹಲವು ಶತಮಾನಗಳ ಹಿಂದೆ ನಡೆದ ಘಟನೆಯೊಂದು ಆಚರಣೆಯಾಗಿ ಮುಂದುವರೆಯಿತು ಎಂಬ ಪುರಾವೆ ಲಭಿಸುತ್ತದೆ.
ಅದು ಕ್ರಿ.ಶ. 269ನೇ ಇಸವಿಯ ದಿನಗಳು… ಆಗ ರೋಮ್ ಸಾಮ್ರಾಜ್ಯವನ್ನು ಕ್ಲಾಡಿಯಸ್ ಎಂಬ ದೊರೆಯು ಆಳುತ್ತಿದ್ದನಂತೆ. ಆತ ಮಹಾಕಟುಕನಾಗಿದ್ದನಂತೆ ಅಷ್ಟೇ ಅಲ್ಲ ಮದುವೆಯನ್ನು ಕೂಡ ದ್ವೇಷಿಸುತ್ತಿದ್ದನಂತೆ. ಅವನ ಪ್ರಕಾರ ಮದುವೆಯಾಗುವುದು ಮಹಾಪರಾಧವಾಗಿತ್ತು. ವ್ಯಕ್ತಿಯೊಬ್ಬ ಮದುವೆ ಎಂಬ ಬಂಧನದಲ್ಲಿ ಸಿಕ್ಕಿಬಿದ್ದರೆ ಸಂಸಾರದ ಜಂಜಾಟದಲ್ಲಿ ತನ್ನ ಕ್ರಿಯಾಶೀಲತೆ ಹಾಗೂ ಬುದ್ದಿಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಎಂಬುವುದು ಕ್ಲಾಡಿಯಸ್‌ನ ಅಭಿಪ್ರಾಯವಾಗಿತ್ತು. ಹಾಗಾಗಿ ಆತ ಮದುವೆ ಎಂದರೆ ಕೆಂಡಮಂಡಲವಾಗುತ್ತಿದ್ದನು. ಒಂದು ವೇಳೆ ರಾಜಾಜ್ಞೆಯನ್ನು ಮೀರಿ ಮದುವೆಯಾಗಿದ್ದೇ ಆದಲ್ಲಿ ಮದುವೆಯಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಗಲ್ಲಿಗೇರಿಸುತ್ತಿದ್ದನು.
ದೊರೆ ಕ್ಲಾಡಿಯಸ್‌ನ ಈ ಹುಚ್ಚಾಟ ಪಾದ್ರಿ ವ್ಯಾಲೆಂಟೈನನ್ನು ಕೆರಳಿಸಿತ್ತು. ಹಾಗಾಗಿ ದೊರೆಯ ನೀತಿಯನ್ನು ಖಂಡಿಸುತ್ತಾ ದೊರೆ ಕ್ಲಾಡಿಯಸ್‌ನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸಿ ಅವರಿಗೆ ಮದುವೆ ಮಾಡತೊಡಗಿದ್ದನು. ಆದರೆ ಇದು ಹೆಚ್ಚು ದಿನ ಗುಪ್ತವಾಗಿ ಉಳಿಯಲಿಲ್ಲ. ಪಾದ್ರಿ ವ್ಯಾಲೆಂಟೈನ್ ಪ್ರೇಮಿಗಳನ್ನು ಒಂದುಗೂಡಿಸುತ್ತಿರುವ ವಿಚಾರ ದೊರೆ ಕ್ಲಾಡಿಯಸ್‌ನ ಕಿವಿಗೆ ಬಿತ್ತು. ತನ್ನ ಆಜ್ಞೆಯನ್ನು ಮೀರಿದ ವ್ಯಾಲೆಂಟೈನ್ ಮೇಲೆ ಕೆಂಡಾಮಂಡಲನಾದನಲ್ಲದೆ, ಅವನಿಗೆ ಮರಣದಂಡನೆಯನ್ನು ವಿಧಿಸಿದನು.
ಅದರಂತೆ ಫೆಬ್ರವರಿ 14ರಂದು ಪಾದ್ರಿ ವ್ಯಾಲೆಂಟೈನನ್ನು ಗಲ್ಲಿಗೇರಿಸಲಾಯಿತು. ಪ್ರೇಮಿಗಳಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಪಾದ್ರಿ ವ್ಯಾಲೆಂಟೈನ್‌ನ ಸ್ಮರಣೆಗಾಗಿ ಆ ದಿನವನ್ನು ವ್ಯಾಲೆಂಟೈನ್ ಡೇ ಆಚರಣೆಗೆ ಬಂತೆಂದು ಹೇಳಲಾಗುತ್ತಿದೆ. ಇದೀಗ ಆಚರಣೆ ವರ್ಷದಿಂದ ವರ್ಷಕ್ಕೆ ಒಂದಷ್ಟು ಬದಲಾವಣೆ ಕಾಣುತ್ತಾ ಸಾಗುತ್ತಿದೆ.
ಪ್ರೇಮಿಗಳ ದಿನ ಬರೀ ಆಚರಣೆಯಲ್ಲ. ಅದು ಅದೇ ಪ್ರೀತಿಯನ್ನು ಮತ್ತೆ ಮತ್ತೆ ಹೊಸತನಗೊಳಿಸುವ ಎರಡು ಹೃದಯಗಳ ನಡುವೆ ಇನ್ನಷ್ಟು ಪ್ರೀತಿ ತುಂಬುವ, ಸಂಭ್ರಮಿಸುವ ಹಬ್ಬವಾಗಬೇಕು. ಪ್ರೇಮ ಎನ್ನುವುದು ತೋರಿಕೆಯಲ್ಲ ಅದು ಎರಡು ಹೃದಯಗಳ ವಿಷಯ.. ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಅಗತ್ಯ. ಅದು ಪ್ರೇಮಿಗಳ ಮನಸ್ಸನಲ್ಲಿರಬೇಕಷ್ಟೆ.