ನಿಮ್ಮನ್ನು ಯಾಕೆ ಅಮಾನತು ಮಾಡಬಾರದು: ಕುಂದಾಪುರದಲ್ಲಿ ಸಚಿವ ಕೋಟ ಕೆಂಡಮಂಡಲ

Spread the love

ನಿಮ್ಮನ್ನು ಯಾಕೆ ಅಮಾನತು ಮಾಡಬಾರದು: ಕುಂದಾಪುರದಲ್ಲಿ ಸಚಿವ ಕೋಟ ಕೆಂಡಮಂಡಲ

 
ಕುಂದಾಪುರ: ಸುಸಜ್ಜಿತ ಹಾಸ್ಟೇಲ್ ನಿರ್ಮಾಣಕ್ಕಾಗಿ 3.63 ಕೋ.ರೂ. ಅನುದಾನ ನೀಡಲಾಗಿದೆ. ಕೇವಲ 1.5 ಕೋ.ಟಿ ರೂ.ಗಳ ಕಾಮಗಾರಿ ಮಾಡಲಾಗಿದೆ. ಅಂಗಳಕ್ಕೆ ಹಾಸುವ ಕಲ್ಲನ್ನು ಹಾಸ್ಟೆಲ್‍ನ ಒಳ ನೆಲಕ್ಕೆ ಬಳಸಲಾಗಿದೆ. ಹಾಸ್ಟೆಲ್ ಕಟ್ಟಡದ ದುರವಸ್ಥೆಗೆ ಕಾರಣರಾದ ಎಂಜಿನಿಯರ್, ಅಧಿಕಾರಿಗಳಿಗೆ ‘ನಿಮ್ಮನ್ನು ಯಾಕೆ ಅಮಾನತು ಮಾಡಬಾರದು’ ಎಂದು ಕಾರಣ ಕೇಳಿ ನೋಟಿಸ್ ನೀಡಿ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಮಂಗಳವಾರ ಇಲ್ಲಿನ ಮಿನಿವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಸಾರ್ವಜನಿಕ ಅಹವಾಲು ಸ್ವೀಕರಿಸಿದ ಅವರು ಈ ಕುರಿತು ಸೂಚನೆ ನೀಡಿದರು.

ಇಂತಹ ದುರವಸ್ಥೆಗಳ ಆಗರವಾಗಿರುವ ಹಾಸ್ಟೆಲ್‍ನಲ್ಲಿ ಮಕ್ಕಳಿಗೆ ಉಳಿದುಕೊಳ್ಳಿ ಎಂದು ಹೇಳುವುದು ಎಷ್ಟು ಸಮಂಜಸ. ಕಾಮಗಾರಿಯ ಅಂದಾಜುಪಟ್ಟಿ ತಯಾರಿಸಿದ ಎಂಜಿನಿಯರ್‍ಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಕಾಮಗಾರಿ ಪರಿಶೀಲಿಸಿದ ಎಂಜಿನಿಯರ್‍ನ ಮೇಲೆ ಕ್ರಮ ಕೈಗೊಳ್ಳಬೇಕು, ವರ್ಗಾವಣೆ ಮಾಡಬೇಕು. ಬೇಜವಾಬ್ದಾರಿ ಮಾಡಿದವರನ್ನು ಕೆಲಸದಿಂದಲೇ ತೆಗೆದುಹಾಕಬೇಕು. ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಿಯೇ ಹಾಸ್ಟೆಲನ್ನು ಬಿಟ್ಟುಕೊಡಬೇಕು ಎಂದು ಸಚಿವರು ತಾಕೀತು ಮಾಡಿದರು.

ಈ ವೇಳೆಯಲ್ಲಿ ಹಾಸ್ಟೆಲ್ ಕಾಮಗಾರಿ ಕುರಿತು ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಕೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಾಸ್ಟೆಲ್ ಸೇರ್ಪಡೆಗೆ ತಾಲೂಕು ಗಡಿಗಳ ಮಿತಿ ಇದ್ದು ತಾಲೂಕಿನ ಗಡಿ ಭಾಗದ ಇನ್ನೊಂದು ತಾಲೂಕಿನ ಶಿಕ್ಷಣ ಸಂಸ್ಥೆಗೆ ಸೇರುವಂತಿಲ್ಲ. ಆ ತಾಲೂಕಿನ ಹಾಸ್ಟೆಲ್ ದೂರದಲ್ಲಿರುತ್ತದೆ ಎಂದು ಅಹವಾಲು ಬಂದಾಗ ತಾಲೂಕು ಗಡಿ ಮಿತಿಯನ್ನು ತೆಗೆದುಹಾಕುವಂತೆ ಪತ್ರ ತಯಾರಿಸಿದಲು ಸಚಿವರು ಸೂಚಿಸಿದರು.

ಸಹಾಯಕ ಕಮಿಷನರ್ ಕೆ. ರಾಜು, ತಹಶೀಲ್ದಾರ್ ಕಿರಣ್ ಗೌರಯ್ಯ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರಾಘವೇಂದ್ರ ವರ್ಣೇಕರ್, ಬಿಸಿಎಂ ತಾಲೂಕು ಅಧಿಕಾರಿ ನರಸಿಂಹ ಪೂಜಾರಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರಾದ ಪ್ರಭಾಕರ್ ವಿ., ಸಂತೋಷ್ ಕುಮಾರ್ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ದಿವಾಕರ ಕಡ್ಗಿ, ಪ್ರಕಾಶ್ ಖಾರ್ವಿ, ರತ್ನಾಕರ್ ಚರ್ಚ್ ರಸ್ತೆ, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಬಿಜೆಪಿ ಮುಖಂಡರಾದ ಸದಾನಂದ ಉಪ್ಪಿನಕುದ್ರು, ಕರಣ್ ಪೂಜಾರಿ, ಗೋಪಾಲ್ ಕಳಂಜಿ, ಭಾಸ್ಕರ ಬಿಲ್ಲವ ಮೊದಲಾದವರು ಇದ್ದರು.


Spread the love