ನಿರಂತರ ಪ್ರಯತ್ನದಿಂದ ನಿರ್ದಿಷ್ಠ ಗುರಿ ಮುಟ್ಟಲು ಸಾಧ್ಯ – ಬಿಷಪ್ ಜೆರಾಲ್ಡ್ ಲೋಬೊ

Spread the love

ನಿರಂತರ ಪ್ರಯತ್ನದಿಂದ ನಿರ್ದಿಷ್ಠ ಗುರಿ ಮುಟ್ಟಲು ಸಾಧ್ಯ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ನಿರಂತರ ಪ್ರಯತ್ನದಿಂದಾಗಿ ನಿರ್ದಿಷ್ಠ ಗುರಿ ಮುಟ್ಟುವದರಲ್ಲಿ ಸಂಶಯವಿಲ್ಲ ಇದರಿಂದ ನಮ್ಮ ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಉದ್ಯವಾರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ವತಿಯಿಂದ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಣದ ಕೊರತೆಯಿಂದ ಶಿಕ್ಷಣ ಪಡೆಯದೆ ಇರಬೇಕಾಗಿಲ್ಲ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಧನಸಹಾಯ ನೀಡಿ ಸಹಕರಿಸುವವರು ಹಲವು ಉದಾರ ಮನಸ್ಸಿನ ದಾನಿಗಳಿದ್ದಾರೆ. ಇಂದು ಸಮಾಜದಲ್ಲಿ ಅವಕಾಶಗಳಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕಾಗಿದೆ.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿದ್ಯಾಂಗ ಇಲಾಖೆ ಮಂಗಳೂರು ಜಂಟಿ ನಿರ್ದೇಶಕ ಸಿಪ್ರಿಯನ್ ಮೊಂತೆರೋ ಮಾತನಾಡಿ ಯುವಜನತೆ ಹೆಚ್ಚು ಸರಕಾರಿ ಹುದ್ದೆಗಳತ್ತ ಆಸಕ್ತಿ ಹೊಂದಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಹಂತದಲ್ಲಿಯೇ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಜಾನ್ ಡಿಸಿಲ್ವಾ ಫೌಂಡೇಶನ್ ಮುಂಬೈ ಪ್ರಾಯೋಜಕತ್ವದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೆಥೊಲಿಕ್ ಸಭಾ ಪ್ರಾಯೋಜಕತ್ವದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ಇದರ ಅಧ್ಯಕ್ಷರಾದ ಜಾನ್ ಡಿಸಿಲ್ವಾ, ಗ್ಲ್ಯಾಡಿಸ್ ಡಿಸಿಲ್ವಾ, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚಿನ ಧರ್ಮಗುರು ವಂ|ಸ್ಟ್ಯಾನಿ ಬಿ ಲೋಬೊ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕರಾದ ಡಾ|ಜೆರಾಲ್ಡ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಉಡುಪಿ ವಲಯಾಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಉದ್ಯಾವರ ಘಟಕಾಧ್ಯಕ್ಷ ಲೊರೇನ್ಸ್ ಡೆಸಾ ಹಾಗೂ ಇತರರು ಉಪಸ್ಥಿತರಿದ್ದರು.

ಉಡುಪಿ ಪ್ರದೇಶ್ ಅಧ್ಯಕ್ಷ ರೋಬರ್ಟ್ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.


Spread the love