ನಿವೃತ್ತಿಯಾಗುವ ಶಿಕ್ಷಕಿಗೆ ಪೆನ್ಶನ್ ಮಂಜೂರಾತಿಗೆ 20ಲಕ್ಷ ರೂ ಲಂಚದ ಬೇಡಿಕೆ ಇಟ್ಟ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ

Spread the love

ನಿವೃತ್ತಿಯಾಗುವ ಶಿಕ್ಷಕಿಗೆ ಪೆನ್ಶನ್ ಮಂಜೂರಾತಿಗೆ 20ಲಕ್ಷ ರೂ ಲಂಚದ ಬೇಡಿಕೆ ಇಟ್ಟ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ

ಶಾಲಾ ಸಂಚಾಲಕಿ ತನ್ನ ಶಾಲೆಯ ನಿವೃತ್ತಿಯಾಗುತ್ತಿರುವ ಶಿಕ್ಷಕಿಯೊಬ್ಬರಿಗೆ ಪೆನ್ಷನ್ ಸಿಗುವ ದಾಖಲೆಗೆ ಸಹಿ ಹಾಕಲು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಮಂಗಳೂರು ತಾಲೂಕಿನ ಬಟ್ಟೆ, ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಹಾಗು ಮುಖ್ಯ ಶಿಕ್ಷಕಿಯಾಗಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೋಭಾರಾಣಿರವರು ದಿನಾಂಕ 31.07.2023 ರಂದು ವಯೋನಿವೃತ್ತಿ ಹೊಂದಲಿದ್ದು, ತನ್ನ ವಯೋ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ದಿನಾಂಕ 25.05.2023 ರಂದು ಶ್ರೀ ನಿರಂಜನ ಸ್ವಾಮೀ ಅನುದಾನಿತ ಶಾಲೆಯ ಮ್ಯಾನೇಜ್‌ಮೆಂಟ್‌ನ ಸಂಚಾಲಕರಾದ ಶ್ರೀಮತಿ ಜ್ಯೋತಿ ಎನ್ ಪೂಜಾರಿರವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿಕೊಂಡು ಸ್ವೀಕೃತಿಯನ್ನು ನೀಡುವಂತೆ ಕೋರಿಕೊಂಡಿರುತ್ತಾರೆ. ಸದ್ರಿ ಸಂಚಾಲಕರಾದ ಶ್ರೀಮತಿ ಜ್ಯೋತಿ.ಎನ್.ಪೂಜಾರಿರವರು ಸ್ವೀಕೃತಿಯನ್ನು ನಂತರ ನೀಡುವುದಾಗಿ ತಿಳಿಸಿ, ಪಿಂಚಣಿ ಉಪದಾನ ಪತ್ರಗಳನ್ನು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸದೇ, ಸ್ವೀಕೃತಿ ಪತ್ರವನ್ನು ನೀಡದೇ ಫಿರ್ಯಾದಿದಾರರಿಗೆ ಸತಾಯಿಸಿ, ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕಳುಹಿಸಬೇಕಾದರೆ ರೂ.20,00,000/- (ಇಪ್ಪತ್ತು ಲಕ್ಷ) ಹಣ ಕೊಡಬೇಕೆಂದು ಬೇಡಿಕೆ ಇಟ್ಟಿರುತ್ತಾರೆ.

ಆ ನಂತರ ಪುನ: ಫಿರ್ಯಾದಿದಾರರು ದಿನಾಂಕ 05.07.2023 ರಂದು ವಾಪಾಸ್ಸು ಮ್ಯಾನೇಜ್‌ಮೆಂಟ್‌ನ ಕಛೇರಿಯಾದ ಸಂಚಾಲಕರ ವಾಸದ ಮನೆ ಬಳಿ ಹೋಗಿ ಸಂಚಾಲಕರಾದ ಶ್ರೀಮತಿ ಜ್ಯೋತಿ.ಎನ್. ಪೂಜಾರಿರವರನ್ನು ಭೇಟಿ ಮಾಡಿ ತನ್ನ ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಿ ಕಳುಹಿಸಿಕೊಡುವಂತೆ ಕೋರಿಕೊಂಡಿದ್ದು, ಸದ್ರಿಯವರು ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡಬೇಕಾದರೆ, ರೂ 5,00,000/- (ಐದು ಲಕ್ಷ) ಕೊಡಬೇಕು ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.

ಈ ದಿನ ಶ್ರೀ ನಿರಂಜನ ಸ್ವಾಮೀ ಅನುದಾನಿತ ಶಾಲೆಯ ಮ್ಯಾನೇಜ್‌ಮೆಂಟ್‌ ಸಂಚಾಲಕರಾದ ಶ್ರೀಮತಿ ಜ್ಯೋತಿ ಎನ್ ಪೂಜಾರಿರವರು ಪಿರಾದುದಾರರಿಂದ ರೂ 5,00,000/- (ಐದು ಲಕ್ಷ) ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿರುತ್ತಾರೆ. ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಶ್ರೀ ಸಿ.ಎ. ಸೈಮನ್, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಶ್ರೀಮತಿ ಕಲಾವತಿ.ಕೆ, ಶ್ರೀ ಚಲುವರಾಜು. ಬಿ, ಹಾಗೂ ಪೊಲೀಸ್ ನಿರೀಕ್ಷಕರಾದ, ವಿನಾಯಕ ಬಿಲ್ಲವ ಇವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.


Spread the love