
ನಿವೃತ್ತಿ ಘೋಷಿಸಿದ ತನ್ವೀರ್‌ಸೇಠ್:ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ
ಮೈಸೂರು: ವಿಧಾನಸಭೆ ಚುನಾವಣೆಗೆ ಎರಡು ಮೂರು ತಿಂಗಳು ಮಾತ್ರ ಬಾಕಿಯಿದ್ದು, ಟಿಕೆಟ್ ಘೋಷಣೆಯಾಗುತ್ತಿರುವ ಸಂದರ್ಭದಲ್ಲೇ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ನರಸಿಂಹರಾಜ ಕ್ಷೇತ್ರದ ಹಾಲಿ ಶಾಸಕ ತನ್ವೀರ್ ಸೇಠ್ ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿರುವ ತನ್ವೀರ್ ಸೇಠ್, ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ. ೨೦೧೯ರ ನವೆಂಬರ್‌ನಲ್ಲಿ ಆದ ಮಾರಣಾಂತಿಕ ಹಲ್ಲೆ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಅನಾರೋಗ್ಯದ ಕಾರಣ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದರು.
ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದೆ. ಯಾವ ನಿರ್ಧಾರ ತೆಗೆದುಕೊಳ್ಳದಂತೆ, ಯಾರಿಗೂ ಹೇಳದಂತೆ ಸೂಚಿಸಿದ್ದರು ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡವಿದ್ದರಿಂದ ಎನ್.ಆರ್.ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಇತ್ತೀಚೆಗೆ ಛತ್ತೀಸಗಡದ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲೂ ವರಿಷ್ಠರು ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದರು. ಸ್ಪರ್ಧಿಸದಿರುವ ಕುರಿತು ಡಿಸೆಂಬರ್‌ನಿಂದ ಗೋಪ್ಯತೆ ಕಾಯ್ದುಕೊಂಡಿದ್ದೆ. ಇದೀಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದರು.
ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ರಾಜಕಾರಣದಲ್ಲಿ ಇರುವವರೆಗೂ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ಅನಾರೋಗ್ಯದ ನಡುವೆಯೂ ಕಳೆದ ೪ ವರ್ಷದಿಂದ ಜವಾಬ್ದಾರಿ ನಿರ್ವಹಿಸಿರುವ ತೃಪ್ತಿ ಇದೆ. ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುವೆ, ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವೆ ಎಂದು ಹೇಳಿದರು.
ಈ ನಡುವೆ ತನ್ವೀರ್ ಸೇಠ್ ನಿವೃತ್ತಿ ವಿಷಯ ತಿಳಿಯುತ್ತಿದ್ದಂತೆ ಅವರ ಅವರ ಉದಯಗಿರಿ ನಿವಾಸಕ್ಕೆ ದೌಡಾಯಿಸಿದ ಬೆಂಬಲಿಗರು, ಅಭಿಮಾನಿಗಳು ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುತಂತೆ ಒತ್ತಾಯಿಸಿದರು. ರಸುಲ್ ಎಂಬಾತ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಸ್ಥಳದಲ್ಲಿದ್ದ ಉದಯಗಿರಿ ಠಾಣೆ ಪೊಲೀಸರು ಬಾಟಲಿ ಕಸಿದುಕೊಂಡು ಎಸೆದರು. ಬಳಿಕ ಅಲ್ಲಿಯೇ ಇದ್ದ ಉಳಿದ ಅಭಿಮಾನಿಗಳು ಈತನ ಮೈಮೇಲೆ ನೀರು ಸುರಿದು ಸಮಾಧಾನಪಡಿಸಿದರು. ಇಕ್ಬಾಲ್ ಎಂಬುವವರು ಮನೆ ಮೇಲೆ ಹತ್ತಿ ಧುಮುಕಲು ಯತ್ನಿಸಿದಾಗ ಕೆಲವರು ತಡೆದರು. ಕೆಲವರು ಯಾವುದೇ ಕಾರಣಕ್ಕೂ ನಿವೃತ್ತಿ ಪಡೆಯಬಾರದು ಎಂದು ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಕೆಲವರು ಗದ್ಗದಿತರಾಗಿ, ರಾಜಕೀಯ ನಿವೃತ್ತಿ ಪಡೆಯಬಾರದು ನಮ್ಮನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು. ಇದರಿಂದಾಗಿ ಕಾರ್ಯಕರ್ತರನ್ನು ಸಮಾಧಾನಿಸಲು ತನ್ವೀರ್ ಸೇಠ್ ಹೈರಾಣಾದರು.