ನಿವೃತ್ತ ಐಬಿ ಸಾವಿಗೆ ತಿರುವು: ಡಿಕ್ಕಿ ಹೊಡೆದು ಕೊಲೆ

Spread the love

ನಿವೃತ್ತ ಐಬಿ ಸಾವಿಗೆ ತಿರುವು: ಡಿಕ್ಕಿ ಹೊಡೆದು ಕೊಲೆ

ಮೈಸೂರು: ಅಪಘಾತದಲ್ಲಿ ಮೃತಪಟ್ಟಿದ್ದ ನಿವೃತ್ತ ಐಬಿ(ಇಂಟಲಿಜೆನ್ಸಿ ಬ್ಯುರೋ)ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕಾರಿನಲ್ಲಿ ಡಿಕ್ಕಿ ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮೈಸೂರಿನ ಶಾರದಾದೇವಿ ನಗರದ ನಿವಾಸಿ ಆರ್.ಎನ್. ಕುಲಕರ್ಣಿ(82) ಅವರು ಮಾನಸ ಗಂಗೋತ್ರಿಯ ಆವರಣದಲ್ಲಿ ಶುಕ್ರವಾರ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿ ಆಧರಿಸಿ, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಾನಸ ಗಂಗೋತ್ರಿಯ ಆವರಣದಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ವಿವಿ ಪುರಂ ಸಂಚಾರ ಠಾಣೆ ಪೊಲೀಸರು, ಪ್ರಕರಣವನ್ನು ಬೇರೆ ಠಾಣೆಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರಿನ ಶಾರದಾದೇವಿ ನಗರದ ನಿವಾಸಿಯಾದ ಕುಲಕರ್ಣಿ ಅವರು ಎಂದಿನಂತೆ ಶುಕ್ರವಾರ ಸಂಜೆ ವಾಯುವಿಹಾರಕ್ಕೆಂದು ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ನಿತ್ಯದಂತೆ ಒಂದು ಕಡೆ ಕಾರು ನಿಲ್ಲಿಸಿಕೊಂಡು ಚಾಲಕ ನಿಂತಿದ್ದರು. ಆ ವೇಳೆ ವಾಯುವಿಹಾರದಲ್ಲಿದ್ದ ಕುಲಕರ್ಣಿ, ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ವಿಷಯ ತಿಳಿದ ಅವರ ಕಾರುಚಾಲಕ ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಅವರನ್ನು ಕರೆತಂದಿದ್ದಾರೆ. ಆದರೆ ತಲೆಗೆ ತೀವ್ರ ಪೆಟ್ಟು ಬಿದಿದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಮೃತಪಟ್ಟಿದ್ದಾರೆ.

ಕುಲಕರ್ಣಿ ಅವರು ಗಂಗೋತ್ರಿ ಕ್ಯಾಂಪಸ್‌ನಲ್ಲಿ ವಾಯು ವಿಹಾರದಲ್ಲಿದ್ದಾಗ ನಾನು ಎಂದಿನಂತೆ ಒಂದು ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದೆ. ಆದರೆ ಸುಮಾರು 5.45ರ ವೇಳೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಯಾರೋ ಒಬ್ಬರು ನೀವು ನಿತ್ಯ ಕರೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಯಾವುದೋ ವಾಹನ ಗುದ್ದಿಕೊಂಡು ಹೋಗಿದೆ ಎಂದು ತಿಳಿಸಿದರು. ನಾನು ತಕ್ಷಣ ಹೋಗಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾಗಿ ಕಾರು ಚಾಲಕ ನಿಂಗರಾಜು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ರಸ್ತೆ ಅಪಘಾತದ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಕ್ಯಾಂಪಸ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಇಲ್ಲದೇ ಇರುವ ಕಾರು ಡಿಕ್ಕಿ ಹೊಡೆದು ಪರಾರಿಯಾಗಿರುವುದು ಕಂಡು ಬಂದಿದೆ. ಏಕಾ ಏಕಿ ಡಿಕ್ಕಿ ಹೊಡೆದ ಮೇಲೆ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಕೊಲೆ ಉದ್ದೇಶವೇ ಎಂಬ ಅನುಮಾನ ಪೊಲೀಸರಿಗೆ ಖಚಿತವಾಗಿದೆ. ಕೊನೆಗೆ ರಸ್ತೆ ಬದಿಗೆ ಕಾರು ತರಚಿರುವುದು ಸಹ ಕಂಡು ಬಂದಿದೆ. ವಾಯು ವಿಹಾರಕ್ಕೆಂದು ಬಂದಿದ್ದ ರಸ್ತೆ ಸಾರ್ವಜನಿಕ ರಸ್ತೆಯಲ್ಲ. ಹೀಗಾಗಿ ಇದು ಉದ್ದೇಶಪೂರ್ವಕ ಕೊಲೆಯೇ ಎಂಬ ಅಂಶ ಪೊಲೀಸರಲ್ಲಿ ಬಲಗೊಂಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರ್.ಎನ್.ಕುಲಕರ್ಣಿ ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಮಕ್ಕಳು ವಿದೇಶದಲ್ಲಿದ್ದು ಅವರು ಬಂದ ನಂತರ ಕುಲಕರ್ಣಿ ಅವರ ಅಂತ್ಯ ಸಂಸ್ಕಾರದ ಮಾಹಿತಿ ಲಭ್ಯವಾಗಲಿದೆ.

ಮೂಲತಃ ಹಾವೇರಿ ಜಿಲ್ಲೆ ಸವಣೂರಿನ ಕುಲಕರ್ಣಿ ಅವರು, 1963ರಲ್ಲಿ ಕೇಂದ್ರ ಸರಕಾರದ ಇಂಟೆಲಿಜೆನ್ಸ್ ಬ್ಯುರೋ ಸೇರ್ಪಡೆಗೊಂಡು ನಾನಾ ಹುದ್ದೆ ಹಾಗೂ ಸ್ಥಳಗಳಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಭಾರತೀಯ ರಾಜತಾಂತ್ರಿಕ ಕಾರ್ಯಗಳು, ಕಾರ್ಪೊರೇಟ್ ಕ್ಷೇತ್ರದಲ್ಲೂ ಕೆಲಸ ಮಾಡಿದ್ದರು. ವಾಯುಯಾನ ಸಂಶೋಧನಾ ಕೇಂದ್ರ(ಎಆರ್‌ಸಿ)ದಲ್ಲಿ, ಕೇಂದ್ರ ಸರಕಾರದ ವಿದೇಶಿ ಇಂಟೆಲಿಜೆನ್ಸ್ ಏಜೆನ್ಸಿಯ ಸಂಶೋಧನೆ ಮತ್ತು ವಿಶ್ಲೇಷಣೆ ದಳ(ರಾ)ದಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಓಸಿ) ಮಾರ್ಕೆಟಿಂಗ್ ವಿಭಾಗದಲ್ಲಿ ವಿಜಿಲನ್ಸ್ ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು.


Spread the love

Leave a Reply

Please enter your comment!
Please enter your name here