ನಿಸರ್ಗ ಸುಂದರ ಕೊಡಗಿನ ಹೊನ್ನಮ್ಮನ ಕೆರೆ

Spread the love

ನಿಸರ್ಗ ಸುಂದರ ಕೊಡಗಿನ ಹೊನ್ನಮ್ಮನ ಕೆರೆ

ಮಡಿಕೇರಿ: ಕೊಡಗಿನಲ್ಲಿ ಗೌರಿಹಬ್ಬದಂದು ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆಯಲ್ಲಿರುವ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವುದು ಹಿಂದಿನಿಂದಲೂ ನಡೆದು ಬಂದಿದ್ದು, ಅಂದು ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಸಹಸ್ರಾರು ಮಂದಿ ಇಲ್ಲಿಗೆ ಆಗಮಿಸಿ ಪೂಜಾ ಕಾರ್ಯ ನೆರವೇರಿಸುತ್ತಾರೆ.

ಹೊನ್ನಮ್ಮನ ಕೆರೆ ನೆಲೆ ನಿಂತ ಪ್ರದೇಶವು ಕೊಡಗಿನ ಪ್ರವಾಸಿತಾಣಗಳಲ್ಲೊಂದಾಗಿದ್ದು, ಹೆಣ್ಣು ಮಗಳೊಬ್ಬಳ ತ್ಯಾಗ ಬಲಿದಾನದ ಕಥೆ ಹೇಳುವ ಕೆರೆಯಾಗಿ ಗಮನಸೆಳೆಯುತ್ತಿದೆ. ಪ್ರತಿದಿನವೂ ಕೆರೆ ದಡದಲ್ಲಿ ನೆಲೆನಿಂತಿರುವ ಹೊನ್ನಮ್ಮನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತವೆಯಾದರೂ ಗೌರಿಹಬ್ಬದಂದು ಜನಜಾತ್ರೆ ನೆರೆಯುತ್ತದೆ. ಈ ವೇಳೆ ಹೆಂಗೆಳೆಯರು ಆಗಮಿಸಿ ಹೊನ್ನಮ್ಮನಿಗೆ ಬಾಗಿನ ಅರ್ಪಿಸಿ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಬೇಡಿಕೊಳ್ಳುತ್ತಾರೆ.

ಇನ್ನು ಕೆರೆ ನಿರ್ಮಾಣದ ಹಿಂದೆ ಕಥೆಯೊಂದು ಪ್ರಚಲಿತದಲ್ಲಿದ್ದು ಕ್ರಿ.ಶ1106ರ ಕಾಲಾವಧಿಯಲ್ಲಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ಊರಿನ ಹಿತಕ್ಕಾಗಿ ಕೆರೆನಿರ್ಮಿಸುತ್ತಾನೆ. ಆದರೆ ಕೆರೆಯಲ್ಲಿ ನೀರು ಸಿಗುವುದಿಲ್ಲ. ಈ ವೇಳೆ ಕೆರೆಗೆ ಮುತ್ತೈದೆಯನ್ನು ಹಾರ ನೀಡಿದರೆ ನೀರು ಬರುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಈ ವೇಳೆ ಮಲ್ಲೇಗೌಡನ ಕಿರಿಸೊಸೆ ಹೊನ್ನಮ್ಮ ತಾನೇ ಊರಿನ ಹಿತಕ್ಕಾಗಿ ತಾನೇ ಕೆರೆಗೆ ಹಾರವಾಗಲು ಒಪ್ಪಿಕೊಂಡು ಕೆರೆಗೆ ಹಾರವಾದಳು. ಆ ನಂತರ ಕೆರೆಯಲ್ಲಿ ನೀರು ಕಾಣಿಸಿಕೊಳ್ಳುತ್ತದೆ.

ಹೊನ್ನಮ್ಮನ ಬಲಿದಾನದ ಬಳಿಕ ಆಕೆಯ ನೆನಪಿಗಾಗಿ ಮಾವ ಮಲ್ಲೇಗೌಡ ಕೆರೆಯ ಏರಿಯಲ್ಲಿ ದೇವಾಲಯ ನಿರ್ಮಿಸಿ, ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ಈಗ ಇಲ್ಲಿದ್ದ ದೇವಾಲಯವನ್ನು ಗ್ರಾಮಸ್ಥರು ಕಳೆದ ಹಲವು ವರ್ಷಗಳ ಹಿಂದೆ ಶ್ರಮದಾನದ ಮೂಲಕ ಜೀರ್ಣೋದ್ಧಾರಗೊಳಿಸಿ ಗುಡಿಯ ಮಧ್ಯೆ ಬಸವೇಶ್ವರ ದೇವರ ವಿಗ್ರಹ, ಬಲಭಾಗಕ್ಕೆ ಗಣಪತಿ ಮತ್ತು ತಾಯಿ ಹೊನ್ನಮ್ಮನ ವಿಗ್ರಹ ಹಾಗೂ ಎಡಭಾಗಕ್ಕೆ ಅಮೃತೇಶ್ವರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಗೌರಿಹಬ್ಬ ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಈ ತಾಣ ಪ್ರಶಾಂತವಾಗಿರುತ್ತದೆ. ನಿಸರ್ಗ ಸೌಂದರ್ಯದಿಂದ ಮೈದುಂಬಿಕೊಂಡಿರುವ ಈ ತಾಣ ಪವಿತ್ರ ಕ್ಷೇತ್ರವಾಗಿ, ನಿಸರ್ಗ ಸುಂದರ ತಾಣವಾಗಿ ಆಸ್ತಿಕರು, ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನಡೆಗೆ ಸೆಳೆಯುತ್ತದೆ. ಸೋಮವಾರಪೇಟೆಯಿಂದ ಶನಿವಾರಸಂತೆ ಕಡೆಗಿನ ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದರೆ ದೊಡ್ಡಮಳ್ತೆ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಕ್ಕೆ ಇರುವ ರಸ್ತೆಯಲ್ಲಿ ತೆರಳಿದರೆ ಹೊನ್ನಮ್ಮನ ಕೆರೆಯನ್ನು ತಲುಪಬಹುದು.

ಸುಮಾರು 16.20 ಎಕರೆ ವಿಸ್ತೀರ್ಣ ಹೊಂದಿರುವ ಹೊನ್ನಮ್ಮನಕೆರೆಯಿಂದ ದೊಡ್ಡಮಳ್ತೆ, ಹಾರೋಹಳ್ಳಿ, ಮಸಗೊಡು, ಅಬ್ಬೂರು, ಮೋರಿಕಲ್ಲು ಹಾಗೂ ಅಡಿನಾಡೂರು ಗ್ರಾಮಗಳ ಕೃಷಿಕರ ಜಮೀನಿಗೆ ನೀರು ಹರಿಯುತ್ತಿದ್ದು ಅವರ ಪಾಲಿಗೆ ಹೊನ್ನಮ್ಮ ಅನ್ನದಾತೆಯೂ ಆಗಿದ್ದಾಳೆ. ಕೆರೆಯ ಪ್ರವೇಶ ದ್ವಾರದ ಬಲಕ್ಕೆ ಪುರಾತನ ಕಾಲದ ಗುಡಿಯೊಳಗೆ ಸಿದ್ದೇಶ್ವರ ದೇವರು ಹಾಗೂ ಪೂರ್ವಕ್ಕೆ ಮುಕ್ಕಾಲು ಕಿ.ಮೀ.ದೂರದಲ್ಲಿ ಶಿಲಾರಾಶಿಯ ಮಧ್ಯೆ ದೊಡ್ಡ ನಂದಿ ಹಾಗೂ ಚಿಕ್ಕ ನಂದಿ ವಿಗ್ರಹಗಳಿದ್ದು, ಇವುಗಳಿಗೆ ಜನರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

ಹೊನ್ನಮ್ಮನ ಕೆರೆಯ ಇಕ್ಕೆಲಗಳಲ್ಲಿ ಬೆಟ್ಟಗಳಿದ್ದು ಇವು ಚಾರಣಿಗರಿಗೆ ಹುಮ್ಮಸ್ಸು ನೀಡುತ್ತವೆ. ಇಲ್ಲಿರುವ ಬೆಟ್ಟಗಳ ಪೈಕಿ ದೇವಾಲಯದ ಬಲಭಾಗದಲ್ಲಿರುವ ಒಂಬೈನೂರು ಅಡಿ ಎತ್ತರದಲ್ಲಿರುವ ಗವಿಬೆಟ್ಟ ಹಾಗೂ ಪಾಂಡವರಬೆಟ್ಟ ಹಲವು ವೈಶಿಷ್ಟ್ಯತೆಗಳಿಂದ ಗಮನಸೆಳೆಯುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ಬಂದು ನೆಲೆಸಿದ್ದರಿಂದ ಪಾಂಡವರ ಬೆಟ್ಟ ಎಂಬ ಹೆಸರು ಬಂದಿದ್ದು, ಇಲ್ಲಿ 17 ಕುಟೀರಗಳು ಇರುವುದನ್ನು ಕಾಣಬಹುದು.

ಗವಿಬೆಟ್ಟದ ಮಧ್ಯದಲ್ಲಿ 20 ಮೀಟರ್ ಉದ್ದದ ಗುಹೆಯಿದ್ದು ಅಲ್ಲಿ ಚಿಕ್ಕಕೊಳವೊಂದಿದೆ. ಅದರಲ್ಲಿ ಉದ್ಭವಿಸುವ ಜಲವನ್ನು ತೀರ್ಥವೆಂದು ಉಪಯೋಗಿಸಲಾಗುತ್ತದೆ. ಬೆಟ್ಟದ ಮೇಲೆ ತೆರಳಲು ದಾರಿಗಳಿದ್ದು ಇದರಲ್ಲಿ ಮುನ್ನಡೆದರೆ ಬೆಟ್ಟದ ತುದಿಗೆ ಹೋಗಬಹುದು. ಅಲ್ಲಿ ಬೃಹತ್ ಹೆಬ್ಬಂಡೆಗಳಿದ್ದು, ಅದರ ಮೇಲೆ ನಿಂತು ನೋಡಿದ್ದೇ ಆದರೆ ಪ್ರಕೃತಿಯ ವಿಹಂಗಮನೋಟ ಮೂಕಸ್ಮಿತರನ್ನಾಗಿ ಮಾಡುತ್ತದೆ. ದೂರದ ಬೆಟ್ಟಗಳಾಚೆ ಕಾಣಸಿಗುವ ಸೂರ್ಯಾಸ್ತಮಾನದ ದೃಶ್ಯ ಮರೆಯಲಾರದ ಅನುಭವ ನೀಡುತ್ತದೆ.


Spread the love