
ನೀವೆಲ್ಲಾ ನೋಡಿದ್ದು ಕಾಂತಾರ-2, ಮುಂದೆ ಬರುವುದು ಕಾಂತಾರ ಪಾರ್ಟ್-1: ರಿಷಬ್ ಶೆಟ್ಟಿ
ಬೆಂಗಳೂರು: ಕಳೆದವರ್ಷ ತೆರೆಕಂಡು ಕರ್ನಾಟಕ, ಭಾರತ ಮಾತ್ರವಲ್ಲದೆ ಭಾರತದಾಚೆಗೂ ಜನಪ್ರಿಯವಾದ, ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರ ‘ಕಾಂತಾರ’ ಕ್ಕೆ ಈಗ ಶತದಿನದ ಸಡಗರ, ಇತ್ತೀಚೆಗೆ ಈ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಬೆಂಗಳೂರಿನ ಬಂಟರ ಸಂಘದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅದ್ದೂರಿಯಾಗಿ ಆಯೋಜಿಸಿದ್ದರು.
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾದ ಮುಂದಿನ ಭಾಗದ ಕಥೆ ಏನು ಎನ್ನುವ ಕುತೂಹಲಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ. “ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಈ ಕಥೆಯನ್ನು ಮೊದಲು ಕಾರ್ತಿಕ್ ಗೌಡ ಅವರ ಹತ್ತಿರ, ಆನಂತರ ವಿಜಯ್ ಸರ್ ಅವರ ಬಳಿ ಕಥೆ ಹೇಳಿದೆ. ತಕ್ಷಣ ಒಪ್ಪಿಗೆ ನೀಡಿ ನಿರ್ಮಾಣಕ್ಕೆ ಮುಂದಾದರು.
ಚಿತ್ರವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮದ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ. ಎಲ್ಲರೂ ಕೇಳುತ್ತಿದ್ದಾರೆ?. ” ಕಾಂತಾರ ಭಾಗ 2″ ಯಾವಾಗ ಎಂದು? ಆದರೆ ನೀವು ನೋಡಿರುವುದೇ “ಭಾಗ 2”. “ಕಾಂತಾರ ಭಾಗ 1” ಮುಂದೆ ಬರಲಿದೆ ಎಂದು ತಿಳಿಸಿದರು.
ಚಿತ್ರತಂಡದಲ್ಲಿ ಕಾರ್ಯನಿರ್ವಹಿಸಿದರನ್ನು, ಚಿತ್ರಮಂದಿರಗಳ ಮಾಲೀಕರು, ವಿತರಕರನ್ನು ಸ್ವತಃ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ನ ಮುಖ್ಯಸ್ಥ ವಿಜಯ್ ಕಿರಗಂದೂರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
‘ಒಟಿಟಿಯಲ್ಲಿ ರಿಲೀಸ್ ಆದರೂ, ಚಿತ್ರಮಂದಿರಗಳಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶನ ಮುಂದುವರಿದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾದೇಶಿಕ ಸಿನಿಮಾವೊಂದು ಬಿಡುಗಡೆಯಾಗಿ, ತನ್ನಷ್ಟಕ್ಕೇ ಪ್ಯಾನ್ ಇಂಡಿಯಾ ಸ್ವರೂಪ ಪಡೆದಿತ್ತು. ನೆಟ್‌ಫ್ಲಿಕ್ಸ್‌ನಲ್ಲೂ ‘ಕಾಂತಾರ’ ಸಿನಿಮಾ ಇಂಗ್ಲಿಷ್‌ಗೆ ಡಬ್ ಮಾಡಿ ಬಿಡುಗಡೆ ಮಾಡಲು ಪ್ರಯತ್ನ ನಡೆಯುತ್ತಿದೆ’ ಎಂದರು ರಿಷಬ್.
ಮಾಹಿತಿಯಂತೆ ರಿಷಬ್ ಸದ್ಯ ಪ್ರೀಕ್ವೆಲ್‌ನ ಸ್ಕ್ರಿಪ್ಟ್ ಕಾರ್ಯಗಳನ್ನು ಆರಂಭಿಸಿದ್ದು, ಜೂನ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.