ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇಂದು ಪ್ರಮಾಣವಚನ

Spread the love

ಸಿದ್ದರಾಮಯ್ಯ 2.0, ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ದರಾಮಯ್ಯ  ಅವರು ಹಾಗೂ ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಇಂದು (ಮೇ 20) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ  ಪದಗ್ರಹಣ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

10 ಮಂದಿ ಪ್ರಮಾಣವಚನ
ಕಾಂಗ್ರೆಸ್​​ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಸೇರಿದಂತೆ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರಲ್ಲಿ ಇಂದು 8 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಂ.ಬಿ. ಪಾಟೀಲ್, ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪದಗ್ರಹಣ ಸಮಾರಂಭಕ್ಕೆ ದೇಶದ ಹಲವು ಗಣ್ಯರಿಗೆ ಆಹ್ವಾನ
ಇನ್ನು ಪದಗ್ರಹಣ ಸಮಾರಂಭಕ್ಕೆ ದೇಶದ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರನ್ನು ಆಹ್ವಾನಿಸಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪುದುಚೆರಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪಕ್ಷಗಳ ನಾಯಕರು, ಮಾಜಿ ಮುಖ್ಯಮಂತ್ರಿಗಳು
ಎನ್​ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಡಿ.ರಾಜಾ, ಜೆಡಿಯು ಅಧ್ಯಕ್ಷ, ಸಂಸದ ಲಾಲನ್‌ ಸಿಂಗ್‌, ಎಮ್​ಡಿಎಮ್​ಕೆ ಅಧ್ಯಕ್ಷ ವೈಕೋ, ಆರ್‌ಎಸ್‌ಪಿ ನಾಯಕ ಹಾಗೂ ಸಂಸದ ಎನ್‌.ಕೆ.ಪ್ರೇಮಚಂದ್ರನ್‌, ಸಿಪಿಐ(ಎಂಎಲ್‌) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ವಿಸಿಕೆ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭೆ ಸದಸ್ಯ ತಿರುಮಾವಳವನ್, ಆರ್‌ಎಲ್‌ಡಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಜಯಂತ್ ಚೌಧರಿ, ಕೇರಳ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಜೋಸ್ ಕೆ.ಮಣಿ, ಐಯುಎಂಎಲ್‌ ಪಕ್ಷದ ಮುಖ್ಯಸ್ಥ ಸಾದಿಕ್ ಅಲಿ ತಂಗಳ್‌ ಅವರಿಗೆ ಆಹ್ವಾನಿಸಲಾಗಿದೆ.

ವೇದಿಕೆ ಮೇಲೆ 30 ಗಣ್ಯರಿಗೆ ಮಾತ್ರ ಅವಕಾಶ
ವೇದಿಕೆ ಮೇಲೆ 30 ಗಣ್ಯರು ಮಾತ್ರ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮುಂಭಾಗ ಶಾಸಕರು, ಶಾಸಕರ ಕುಟುಂಬಸ್ಥರಿಗೆ ಅವಕಾಶ ನೀಡಲಾಗಿದೆ. ವಿವಿಐಪಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಮಧ್ಯಭಾಗದಲ್ಲಿ ಸುಮಾರು 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಸ್ಟೇಡಿಯಂ ಗ್ಯಾಲರಿಯಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಟೇಡಿಯಂ ಒಳಭಾಗದಲ್ಲಿ ಹತ್ತು ಬೃಹತ್ ಎಲ್ಇಡಿ ಅಳವಡಿಸಲಾಗಿದ್ದು, ಸ್ಟೇಡಿಯಂ ಹೊರಗಡೆಯೂ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ.

ವಾಹನಗಳ ನಿಲುಗಡೆಗೆ ವ್ಯವಸ್ಥೆ
ಸೇಂಟ್ ಜೋಸೆಫ್ ಕಾಲೇಜು ಮೈದಾನದಲ್ಲಿ ಗಣ್ಯರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇತರೆ ವಾಹನ ಬಿಬಿಎಂಪಿ ಮುಖ್ಯ ಕಚೇರಿ ಆವರಣ, ಬಾದಾಮಿ ಹೌಸ್, ಯುನೈಟೆಡ್ ಮಿಷನ್ ಕಾಲೇಜು ಮೈದಾನದಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿದೆ. ಕಸ್ತೂರಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ; ಅರಮನೆ ಮೈದಾನದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಚನೆ ನೀಡಲಾಗಿದೆ.


Spread the love

Leave a Reply

Please enter your comment!
Please enter your name here