ನೇಗಿಲ ಹಿಡಿದ ಹೊಲದಲಿ ವಿದ್ಯಾರ್ಥಿಗಳ ಕಲರವ!

Spread the love

ನೇಗಿಲ ಹಿಡಿದ ಹೊಲದಲಿ ವಿದ್ಯಾರ್ಥಿಗಳ ಕಲರವ!

  • ಕೃಷಿ ಗದ್ದೆಯಲ್ಲಿ ನಾಟಿ ಸಂಭ್ರಮದ ಗಮ್ಮತ್ತು. ಕೆಸರು ಗದ್ದೆಯಲ್ಲಿ ಹೊರಳಾಡಿದ ವಿದ್ಯಾರ್ಥಿಗಳು.

 
ಕುಂದಾಪುರ: ನೇಗಿಲ ಹಿಡಿದ ಹೊಲದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ.. ಹಸುರಿನ ಬನಸಿರಿಗೇ ಒಲಿದು.. ಸೌಂದರ್ಯ ಸರಸ್ವತಿ ಧರೆಗಿಳಿದು..ಹೀಗೆ ಹಳೆಯ ಗೀತೆಗಳನ್ನು ಹಾಡುತ್ತ ಆ ಗದ್ದೆಗಳಲ್ಲಿ ಆಸಕ್ತಿಯಿಂದ ನೇಜಿ ಕಾರ್ಯ ಮಾಡುತ್ತಿದ್ದ ಮಕ್ಕಳು ಒಂದೆಡೆಯಾದರೆ, ಆ ಮಕ್ಕಳಿಗೆ ಕೃಷಿ ಬಗೆಗಿನ ಪಾಠ ಮಾಡುತ್ತಿರುವ ಅನುಭವಿ ಕೃಷಿಕ ಮಹಿಳೆಯರು ಇನ್ನೊಂದೆಡೆ. ಮತ್ತೊಂದೆಡೆ ತರಗತಿ‌ ಕೋಣೆಯೊಳಗೆ ಶಿಸ್ತುಬದ್ದವಾಗಿ ಪಾಠ ಮಾಡುತ್ತಿದ್ದ ಶಿಕ್ಷಕ, ಶಿಕ್ಷಕಿಯರ ಕೈಯ್ಯಲ್ಲೂ ನೇಜಿ‌!

ಇದೆಲ್ಲಾ ಕಂಡುಬಂದದ್ದು ತಾಲೂಕಿನ ಬಾಂಡ್ಯಾ ಗ್ರಾಮದ ಕೆಳಬಾಂಡ್ಯಾ ಎನ್ನುವ ಕೃಷಿ ಗದ್ದೆಗಳಲ್ಲಿ. ಭಾನುವಾರದ ರಜೆಯ ಮಜಾವನ್ನು ಸವಿಯಬೇಕು ಎನ್ನುವ ಆಲೋಚನೆ ಮಾಡಿದ್ದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ ಹತ್ತನೇ ತರಗತಿಯ ಸುಮಾರು ತೊಂಭತ್ತರಷ್ಟು ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆನೆ ವಿಸ್ತಾರವಾದ ಗದ್ದೆಗಳಲ್ಲಿ ನಾಟಿ ಕಾರ್ಯಕ್ಕೆ ತಯಾರಿ ನಡೆಸಿದ್ದರು.

ಉದ್ಯೋಗ, ತಂತ್ರಜ್ಙಾನ, ನಿರಾಸಕ್ತಿ ಮುಂತಾದ ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಯುವ ಸಮುದಾಯ ವಿಮುಖವಾಗುತ್ತಿರುವುದನ್ನು ಕಂಡ ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್ ನ ಜಂಟಿ ಆಡಳಿತ ನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ ಹಾಗೂ ಅನುಪಮಾ ಎಸ್ ಶೆಟ್ಟಿ ಇವರು ಕಳೆದ ಕೆಲ ವರ್ಷಗಳಿಂದ ತಮ್ಮದೇ ಶಾಲೆಯ ವಿದ್ಯಾರ್ಥಿಗಳ ಮೂಲಕ ಭತ್ತದ ಗಿಡಗಳ ನಾಟಿ ಕಾರ್ಯದ ಕಸುಬನ್ನು ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಆಟಿ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೆ ಮಲೆನಾಡಿನ ಗ್ರಾಮೀಣ ಭಾಗವಾದ ಕೆಳ ಬಾಂಡ್ಯಾದಲ್ಲಿ ಗದ್ದೆಗಳನ್ನು ಹಸನು ಮಾಡಿ ವಿದ್ಯಾರ್ಥಿಗಳಿಂದಲೇ ನಾಟಿ ಕಾರ್ಯ ಮಾಡಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ನಾಟಿಗಾಗಿ ಮುಹೂರ್ತವನ್ನು ನಿಗಧಿಪಡಿಸಿದ ಬಳಿಕ ಸಂಸ್ಥೆಯ ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದದ ಜೊತೆ ವಿದ್ಯಾರ್ಥಿಗಳನ್ನು ಕರೆತರಲಾಗುತ್ತದೆ.

ನಾಟಿ ಕಾರ್ಯಕ್ಕಾಗಿ ಗದ್ದೆಗೆ ಇಳಿಯುವ ಎಲ್ಲರೂ ಇಲ್ಲಿ ವಿದ್ಯಾರ್ಥಿಗಳೆ. ಸ್ಥಳೀಯ ಅನುಭವಿ ಕೃಷಿಕರೆ ಇವರಿಗೆಲ್ಲಾ ಶಿಕ್ಷಕರು. ಸ್ಥಳೀಯ ಭಾಷೆಯಲ್ಲಿ ಹೇಳುವ ಅಗೆ (ಭತ್ತದ ಸಸಿ)ಯನ್ನು ಹೊತ್ತು ತರುವುದರಿಂದ ಹಿಡಿದು ಗದ್ದೆಯ ಕೆಸರಿನಲ್ಲಿ ನೆಡುವುದರ (ನಾಟಿ ಮಾಡುವುದರ) ವರೆಗೂ ಮಾರ್ಗದರ್ಶನ ದೊರೆಯುತ್ತದೆ.

ಕೆಸರಲ್ಲಿ ಮಿಂದೆದ್ದ ವಿದ್ಯಾರ್ಥಿಗಳು:
ಪೇಟೆಯಿಂದ ಹಳ್ಳಿಗೆ ಬಂದ ಮಕ್ಕಳಲ್ಲಿ ನಾಟಿ ಕಾರ್ಯದ ಹುಮ್ಮಸ್ಸಿನ ಜೊತೆ ಕೆಸರಿನೊಂದಿಗೆ ಆಟೋಟ ನಡೆಸುವ ಉತ್ಸಾಹ ಕಡಿಮೆಯಾಗಿರಲಿಲ್ಲ. ಸ್ಥಳೀಯ ಅನುಭವಿ ಕೃಷಿಕರೊಂದಿಗೆ ನಾಟಿ ಕಾರ್ಯದಲ್ಲಿ ಪೈಪೋಟಿಗಿಳಿದ ವಿದ್ಯಾರ್ಥಿಗಳು ಪರಿಣಿತ ಕೃಷಿಕರನ್ನು ಮೀರಿಸುವಂತೆ ಖಾಲಿ ಇದ್ದ ಗದ್ದೆಗಳಲ್ಲಿ ಹಸಿರು ಭತ್ತದ ಗಿಡಗಳನ್ನು ಸಾಲು-ಸಾಲಾಗಿ ನಾಟಿ ಮಾಡಿ ಸೈ ಎನಿಸಿಕೊಂಡಿದ್ದರು.

ಈ ಭಾನುವಾರದ ರಜಾ ಮಜಾಕ್ಕಾಗಿ ವಿದ್ಯಾರ್ಥಿಗಳಿಗೆ ಕ್ರೀಡಾಂಗಣವಾಗಿ ದೊರೆತದ್ದೆ ಕೆಳ ಬಾಂಡ್ಯಾದ ಕೆಸರು ತುಂಬಿದ ಗದ್ದೆಗಳು. ತಮ್ಮಲ್ಲೇ ತಂಡವನ್ನು ಮಾಡಿಕೊಂಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಗುಂಪು ಕೆಸರು ಗದ್ದೆಯ ಓಟ, ಹಗ್ಗಜಗ್ಗಾಟ ಮುಂತಾದ ಆಟೋಟಗಳ ಗಮ್ಮತ್ತಿನ ಜೊತೆ ಮೈಗೆಲ್ಲಾ ಗದ್ದೆಯ ಕೆಸರನ್ನು ಎರಚಾಡಿಕೊಂಡು ಸಂಭ್ರಮಪಟ್ಟರು.


Spread the love

Leave a Reply

Please enter your comment!
Please enter your name here