ನೋವನ್ನು ತಣಿಸಿ ನಗುವನ್ನು ತರಿಸುವ ಶಕ್ತಿ ಇರುವುದು ಕಾರ್ಟೂನ್‍ಗಳಿಗೆ ಮಾತ್ರ – ಕಾರ್ತಿಕ್ ಗೌಡ 

Spread the love

ನೋವನ್ನು ತಣಿಸಿ ನಗುವನ್ನು ತರಿಸುವ ಶಕ್ತಿ ಇರುವುದು ಕಾರ್ಟೂನ್‍ಗಳಿಗೆ ಮಾತ್ರ – ಕಾರ್ತಿಕ್ ಗೌಡ 

ಕುಂದಾಪುರ: ಸಮಸ್ಯೆ, ಸಂಕಷ್ಟ, ಬೇಸರ, ದುಖ: ಸೇರಿದಂತೆ ಜೀವನದ ಯಾವುದೇ ಹಂತಗಳಲ್ಲಿಯೂ ನಮ್ಮ ನೋವನ್ನು ತಣಿಸಿ ನಗುವನ್ನು ತರಿಸುವ ಶಕ್ತಿ ಇರುವುದು ಕಾರ್ಟೂನ್‍ಗಳಿಗೆ ಮಾತ್ರ. ಕಳೆದ ಹತ್ತು ವರ್ಷಗಳಿಂದ ಕಾರ್ಟೂನ್ ಹಬ್ಬವನ್ನು ಸಂಘಟಿಸುವುದು ಕೂಡ ಒಂದು ಸಾಧನೆಯೇ ಆಗಿದೆ. 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಹಬ್ಬ 100 ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹೊಂಬಾಳೆ ಫಿಲ್ಮ್ಸ್‍ನ ಕಾರ್ತಿಕ್ ಗೌಡ ಹೇಳಿದರು.


ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ನೇತೃತ್ವದ ಕಾರ್ಟೂನ್ ಬಳಗದ ವತಿಯಿಂದ ಆಯೋಜಿಸಲಾದ “ಕಾರ್ಟೂನ್ ಹಬ್ಬ-2022” ವನ್ನು ಕ್ಯಾರಿಕೇಚರ್ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರ “ಗೋ ಕೊರೋನಾ ಗೋ” ಸಂಚಿಕೆ 2 ನ್ನು ಅನಾವರಣಗೊಳಿಸಿ ಮಾತನಾಡಿದ ಹಿರಿಯ ವ್ಯಂಗ್ಯ ಚಿತ್ರಕಾರ ಜೇಮ್ಸ್ ವಾಜ್, ಚಲನಚಿತ್ರಗಳು ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್. ಆದರೆ, ವ್ಯಂಗ್ಯಚಿತ್ರಗಳ ಸಂಕಲನಗಳು ಪುಸ್ತಕ ಬಿಡುಗಡೆಯ ಮೊದಲೇ ಬ್ಲಾಕ್ ಬಸ್ಟರ್ ಆಗುತ್ತದೆ. ಗೋ ಕೊರೋನಾ ಗೋ ಪ್ರಥಮ ಸಂಚಿಕೆ ಕೊರೋನಕ್ಕೆ ಮೊದಲ ಡೋಸ್ ನೀಡಿದರೇ, ಎರಡನೇ ಆವೃತ್ತಿ ಸಣ್ಣ ಸಣ್ಣ ವೈರಸ್‍ಗಳನ್ನು ಓಡಿಸಿದೆ. ಈ ಎರಡು ಆವೃತ್ತಿಗಳು ವ್ಯಂಗ್ಯಚಿತ್ರಕಾರರ ವೃತ್ತಿ ಬದುಕಿಗೆ ಒಳ್ಳೆಯ ಕೈಪಿಡಿಯಾಗಿದೆ. ರಚನೆ, ಬಣ್ಣ ಹಾಕುವುದು, ಸಾಂದರ್ಬಿಕೆಯನ್ನು ವಿವರಿಸುವುದು ಸೇರಿದಂತೆ ಅಗತ್ಯ ಮಾಹಿತಿಗಳ ಆಗರವಾಗಿದೆ ಎಂದರು.

ಬರಹಗಾರ, ಚಿಂತಕ ಶಂಕರ ಕೆಂಚನೂರು ಮಾತನಾಡಿ, ಸತ್ಯವನ್ನು ತಮಾಷೆಯಾಗಿ ಹೇಳುವುದರಿಂದ ಮನ ಮುಟ್ಟುತ್ತದೆ. ವ್ಯಂಗ್ಯ ಚಿತ್ರಗಳ ಮೂಲಕ ಸಮಾಜಕ್ಕೆ ಕಟು ಸತ್ಯವನ್ನು ನೀಡುವ ಕೆಲಸವನ್ನು ಕಾರ್ಟೂನ್‍ಗಳು ಮಾಡುತ್ತಿದೆ. ವ್ಯಂಗ್ಯ ಚಿತ್ರಗಳಲ್ಲಿನ ಮೊನಚುಗಳಿಂದಾಗಿ ಮಾಧ್ಯಮಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ವೇದಿಕೆ ದೊರಕುತ್ತಿರುವುದು ಒಳ್ಳೆಯ ಬೆಳವಣಿಗೆ. ಮಾಡುವ ಕೆಲಸಗಳು ವ್ಯಕ್ತಿಯನ್ನು ಗುರುತಿಸುತ್ತದೆ. ಪ್ರಸ್ತುತ ಕಾಲಘಟ್ಟದ ಬರವಣಿಗೆಯಲ್ಲಿ ದಾಖಲಾತಿಯ ಕೊರತೆ ಕಾಣುತ್ತಿದೆ. ಸತ್ಯ ಹೇಳುವ ದೈರ್ಯ ಹಾಗೂ ಪ್ರತಿಭೆ ಎರಡು ಬೇಕು. ಸತೀಶ್ ಆಚಾರ್ಯ ಅವರಲ್ಲಿ ಈ ಎರಡು ಅಂಶಗಳು ಇದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡುತ್ತಾ, ಬದಲಾವಣೆಯ ಕಾಲಘಟ್ಟದಲ್ಲಿ ಇರುವ ನಮಗೆ, ಚಳಿಗಾಲದಲ್ಲಿ ಬರುವ ಸಾಲ ಸಾಲು ಹಬ್ಬಗಳ ಸಂಭ್ರಮ ಮರೆಯಾಗುತ್ತಿದೆ. ಆದರೆ ಕುಂದಾಪುರದವರಿಗೆ ಕಳೆದ 9 ವರ್ಷಗಳಲ್ಲಿ ಕಾರ್ಟೂನ್ ಹಬ್ಬ ಈ ಸಂಭ್ರಮವನ್ನು ನೀಡುತ್ತಿದೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಹಾಗೂ ನೀಡುತ್ತಿರುವ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಜನರಿಗೆ ಅಗತ್ಯ ಮಾಹಿತಿಯನ್ನು ಬೇಗನೆ ಹಾಗೂ ನೇರವಾಗಿ ನೀಡುವ ಕಾರ್ಯಗಳು ವ್ಯಂಗ್ಯಚಿತ್ರಗಳಿಂದ ಆಗುತ್ತಿದೆ. ದೇಶದ ವರ್ತಮಾನದ ಆಗು-ಹೋಗುಗಳನ್ನು ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮಾಡಿ, ವಿಮರ್ಶೆ ಮಾಡಿ, ಜನರ ಮುಂದಿಡುವ ಕೆಲಸಗಳು ವ್ಯಂಗ್ಯಚಿತ್ರಕಾರರಿಂದ ಆಗುತ್ತಿದೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ಎ ಪಾಯಸ್, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು.

ಕಾರ್ಟೂನ್ ಬಳಗದ ಸತೀಶ್ ಆಚಾರ್ಯ ಸ್ವಾಗತಿಸಿದರು, ಉಪನ್ಯಾಸಕಿ ಪ್ರೀಯಾಂಕ್ ಜೋಸೆಫ್ ನಿರೂಪಿಸಿದರು, ವ್ಯಂಗ್ಯಚಿತ್ರಕಾರರಾದ ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಕೇಶವ್ ಸಸಿಹಿತ್ಲು ಇದ್ದರು.


Spread the love

Leave a Reply

Please enter your comment!
Please enter your name here