ನ್ಯಾಯ ತೀರ್ಮಾನದಲ್ಲಿ ಮನುಷ್ಯತ್ವವೂ ಮುಖ್ಯ: ನ್ಯಾ. ಪಿ. ವಿಶ್ವನಾಥ ಶೆಟ್ಟಿ

Spread the love

ನ್ಯಾಯ ತೀರ್ಮಾನದಲ್ಲಿ ಮನುಷ್ಯತ್ವವೂ ಮುಖ್ಯ: ನ್ಯಾ. ಪಿ. ವಿಶ್ವನಾಥ ಶೆಟ್ಟಿ

ಮೈಸೂರು: ನ್ಯಾಯ ತೀರ್ಮಾನದಲ್ಲಿ ಕಾನೂನಿನೊಂದಿಗೆ ಮನುಷ್ಯತ್ವವೂ ಮುಖ್ಯವಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿಯವರು ಹೇಳಿದರು.

ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ’ಜ್ಞಾನವಾರಿಧಿ-31’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾನೂನು ಅರಿವು-ನೆರವು ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ವ್ಯಾಪ್ತಿಗೆ ಒಳಪಡುತ್ತಾನೆ. ಹುಟ್ಟಿದಾಗ ಜನನ ಪ್ರಮಾಣ ಪತ್ರ ಮತ್ತು ಆತ ತೀರಿಹೋದಾಗ ಮರಣ ಪ್ರಮಾಣಪತ್ರ ಆತನನ್ನು ದೃಢಿಕರಿಸುತ್ತವೆ. ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಅರಿವು ಬಹಳ ಕಡಿಮೆ. ಹೀಗಾಗಿ ಅವರಿಗೆ ಅವರ ಹಕ್ಕಿನ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ಅದನ್ನು ದೃಢವಾಗಿ ಮಂಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಂವಿಧಾನದಲ್ಲಿ ಇದಕ್ಕಾಗಿಯೇ ಮೂಲಭೂತ ಹಕ್ಕುಗಳು ಮತ್ತು ರಾಜ್ಯನೀತಿ ನಿರ್ದೇಶಕ ತತ್ತ್ವಗಳನ್ನು ಸೇರಿಸಲಾಗಿದೆ. ಮನುಷ್ಯನ ಕಾನೂನಿನ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಅವಶ್ಯಕತೆ ಬಿದ್ದಾಗ ಕಾನೂನಿನ ರಕ್ಷಣೆ ಮತ್ತು ನೆರವು ನೀಡಬೇಕೆಂದು ತಿಳಿಸಲಾಗಿದೆ ಎಂದರು.

ಒಂದು ದೇಶದ ಸಾಮರ್ಥ್ಯವನ್ನು ಅಲ್ಲಿನ ಕಾನೂನು ವ್ಯವಸ್ಥೆಯ ಮೂಲಕವೂ ಅಳೆಯಲಾಗುತ್ತದೆ. ವ್ಯಾಜ್ಯಗಳನ್ನು ಸಂಧಾನದ ಮೂಲಕ ಪರಿಹರಿಸಲು ಹಲವಾರು ಪ್ರಾಧಿಕಾರಗಳನ್ನು ರಚಿಸಲಾಗಿರುತ್ತದೆ. ಪ್ರತಿ ರಾಜ್ಯಕ್ಕೆ ಕಾನೂನು ಸೇವಾ ಪ್ರಾಧಿಕಾರ ಇರುತ್ತದೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ, ವಿಶ್ವಾಸ, ಗೌರವವಿದ್ದಾಗ ಮಾತ್ರ ಕಾನೂನಿನ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ. ಜನರಿಗೆ ನ್ಯಾಯಲಯದ ಮೇಲೆ ನಂಬಿಕೆ ಇರುವುದರಿಂದಲೇ ಇಂದಿಗೂ ಜನ ಅಲ್ಲಿಗೆ ಬರುತ್ತಾರೆ. ನ್ಯಾಯಾಲಯದಲ್ಲಿ ಪ್ರಕರಣಗಳು ಸಾಕಷ್ಟಿವೆ, ನ್ಯಾಯಾಧೀಶರ ಸಂಖ್ಯೆ ಕಡಿಮೆಯಿದೆ ಹೀಗಾಗಿ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತಿಲ್ಲ. ತ್ವರಿತವಾಗಿ, ಕಡಿಮೆ ಖರ್ಚಿನಲ್ಲಿ ನ್ಯಾಯದಾನವನ್ನು ಮಾಡುವ ಉದ್ದೇಶವನ್ನು ನ್ಯಾಯಾಲಯ ಹೊಂದಿರುತ್ತದೆ ಎಂದು ತಿಳಿಸಿದರು.

ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು.


Spread the love