ನ.19 ರಿಂದ ಕನ್ನಡ ಶಾಲಾ ಮಕ್ಕಳ ಹಬ್ಬ

Spread the love

ನ.19 ರಿಂದ ಕನ್ನಡ ಶಾಲಾ ಮಕ್ಕಳ ಹಬ್ಬ

ಮಂಗಳೂರು: ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸುವ ಆಶಯದೊಂದಿಗೆ ಆಟ, ಕುಣಿತ, ನಾಟಕ, ಸಾಹಿತಿಗಳೊಂದಿಗೆ ಸಂವಾದ ಒಳಗೊಂಡ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬವು ನ.19 ಹಾಗೂ 20ರಂದು ಇಲ್ಲಿನ ಪ್ರತಾಪನಗರದ ‘ಸಂಘ ನಿಕೇತನ’ದಲ್ಲಿ ನಡೆಯಲಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಅವರು, ‘ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಹಬ್ಬದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದರಿಂದ 10ನೇ ತರಗತಿವರೆಗಿನ ಸುಮಾರು 15 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ನ.19ರಂದು ಬೆಳಿಗ್ಗೆ 10 ಗಂಟೆಗೆ ಕುದ್ರೋಳಿ ಗೋಕರ್ಣನಾಥ ಕಾಲೇಜು ಮೈದಾನದಿಂದ ಸಂಘನಿಕೇತನದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯದ ಮಹತ್ವ, ಮಹನೀಯರ ಚಿಂತನೆಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಕುದ್ರೋಳಿ ಗಣೇಶ ಅವರ ಜಾದೂ ಪ್ರದರ್ಶನ ನಡೆಯಲಿದೆ’ ಎಂದರು.

ಎರಡನೇ ವೇದಿಕೆಯಲ್ಲಿ ಚಿಂತಕ ರೋಹಿತ್‌ ಚಕ್ರತೀರ್ಥ ಅವರು ಶಿಕ್ಷಕರ ಜತೆ ಸಂವಾದ ನಡೆಸುವರು. ‘ಕನ್ನಡ ಮತ್ತು ರಾಷ್ಟ್ರೀಯತೆ’ ಗೋಷ್ಠಿಯಲ್ಲಿ ರಾಜೇಶ್ ಪದ್ಮಾರ್, ಕನ್ನಡ ಶಾಲೆಯಲ್ಲಿ ಓದಿದವರು ಸ್ಮರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆ ಕುರಿತು ಐಎಎಸ್ ಅಧಿಕಾರಿ ನಂದಿನಿ ಮಾಹಿತಿ ನೀಡುವರು. ಮೂರನೇ ವೇದಿಕೆಯಲ್ಲಿ ನಾಯಕತ್ವ ತರಬೇತಿ, ವೃತ್ತಿ ಮಾರ್ಗದರ್ಶನ, ಪ್ರತಿಭಾ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ನ.20ರಂದು ಜೀವನರಾಂ ಸುಳ್ಯ ಅವರ ರಂಗಾಭಿನಯ, ರಂಗಗೀತೆಗಳು, ಕನ್ನಡ ಶಾಲೆ ಕಟ್ಟಿ ಬೆಳೆಸಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಡಾ. ಮೋಹನ್ ಆಳ್ವ, ಚಂದ್ರಶೇಖರ ದಾಮ್ಲೆ ಅವರ ಯಶೋಗಾಥೆ, ಚಕ್ರವರ್ತಿ ಸೂಲಿಬೆಲೆ ಅವರಿಂದ ‘ಕನ್ನಡ ಎಂದರೆ ಬರಿ ನುಡಿ ಅಲ್ಲ’ ಗೋಷ್ಠಿ, ಮುನಿರಾಜ ರೆಂಜಾಳ ಅವರಿಂದ ಜೀವನ ಮೌಲ್ಯ ಗೋಷ್ಠಿ, ನವದಂಪತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸುವರು ಎಂದು ಹೇಳಿದರು.

ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಪ್ರೊ. ಎಂ.ಬಿ.ಪುರಾಣಿಕ್, ಡಾ. ಸುಧಾಕರ ಶೆಟ್ಟಿ, ಕೆ.ಸಿ.ನಾಯ್ಕ್, ರಮೇಶ್ ಕೆ ಇದ್ದರು.


Spread the love

Leave a Reply

Please enter your comment!
Please enter your name here