ಪಂಚಾಯತ್ ನೀರು ಯೋಗ್ಯವಿಲ್ಲ, ಬೇರೆಯವರ ಬಾವಿ ಮುಟ್ಟುವಂತಿಲ್ಲ: ತಲ್ಲೂರು ವಿಶೇಷ ಗ್ರಾಮಸಭೆಯಲ್ಲಿ ಅಸ್ಪೃಶ್ಯತೆಯ ಅಳಲು

Spread the love

ಪಂಚಾಯತ್ ನೀರು ಯೋಗ್ಯವಿಲ್ಲ, ಬೇರೆಯವರ ಬಾವಿ ಮುಟ್ಟುವಂತಿಲ್ಲ: ತಲ್ಲೂರು ವಿಶೇಷ ಗ್ರಾಮಸಭೆಯಲ್ಲಿ ಅಸ್ಪೃಶ್ಯತೆಯ ಅಳಲು

ಕುಂದಾಪುರ: ಗುರುವಾರ ತಲ್ಲೂರಿನ ಅಂಬೇಡ್ಕರ್ ಸಭಾಭವನದಲ್ಲಿ ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ವಿಶೇಷ ಗ್ರಾಮ ಸಭೆ ಅಧ್ಯಕ್ಷೆ ಭೀಮವ್ವ ಅಧ್ಯಕ್ಷತೆಯಲ್ಲಿ ಜರುಗಿತು.

ದಲಿತರ ಕುಂದುಕೊರತೆಯ ವಿಶೇಷ ಗ್ರಾಮಸಭೆಗೆ ತಲ್ಲೂರು ಪಂಚಾಯತ್‍ನ ಕೆಲ ಸದಸ್ಯರು ಗೈರು ಹಾಜರಾಗಿದ್ದಾರೆ. ದಲಿತರ ಸಭೆಗೆ ಬಂದು ಅವರ ಸಮಸ್ಯೆ ಆಲಿಸದೆ ಅಸ್ಪøಶ್ಯತೆ ಆಚರಣೆ ಮಾಡಿದ ಸದಸ್ಯರ ವಿರುದ್ದ ಶಿಸ್ತುಕ್ರಮಜರುಗಿಸಬೇಕು. ಮತ್ತು ದಲಿತರ ಕುಂದುಕೊರತೆಗಳನ್ನು ಆಲಿಸಬೇಕಾದ ಕೆಲವು ತಾಲೂಕು ಮಟ್ಟದ ಅಧಿಕಾರಿಗಳು ಬೇಕಂತಲೇ ಸಭೆಗೆ ಗೈರಾಗಿದ್ದಾರೆ ಅವರ ವಿರುದ್ದವೂ ಶಿಸ್ತುಕ್ರಮ ಜರುಗಿಸಲು ಆಗ್ರಹ ಕೇಳಿಬಂದಿದ್ದು, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ಕುಂತಿಯಮ್ಮನ ದೇವಸ್ಥಾನದಿಂದ ಕೋಟೆಬಾಗಿಲ ತನಕ
ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿ ನಡೆದಿದೆ. ಕುಂತಿಯಮ್ಮನ ದೇವಸ್ಥಾನದಿಂದ ಕೋಟೆಬಾಗಿಲ ತನಕವೂ ದಲಿತರ ಮನೆಯಿಲ್ಲ. ದಲಿತರ ಅನುದಾನದಿಂದ ಬಲಾಡ್ಯರಿಗೆ ಸೌಲಭ್ಯಗಳು ಸಿಗುತ್ತಿವೆ. ದಲಿತರ ಅನುದಾನವನ್ನು ಅವರ ಕಾಲನಿಗೆ ವಿನಿಯೋಗಿಸಿಕೊಳ್ಳಬೇಕು ಎಂದು ಎಸ್‍ಸಿ-ಎಸ್ಟಿ ಕಾನೂನಿನಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಇಲ್ಲಿ ಸಾಮಾನ್ಯ ಅನುದಾನವನ್ನು ವಿನಿಯೋಗಿಸಿ ದಲಿತರ ಕೇರಿಗೆ ದಲಿತರ ಹಣವನ್ನು ಉಪಯೋಗಿಸಿಕೊಳ್ಳಬೇಕು. ಇಲ್ಲಿಂದಲೇ ದಲಿತರ ಅನುದಾನವನ್ನು ಬಳಸಿಕೊಂಡಿದ್ದು ಅಕ್ಷಮ್ಯ. ಪೈಪ್‍ಲೈನ್ ಕಾಮಗಾರಿಯಲ್ಲಿ ದಲಿತರ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕಾಮಗಾರಿಯ ಇಂಜಿನಿಯರ್ ಕರೆಸಿ ಇದರ ಎಸ್ಟಿಮೇಟ್ ಅನ್ನು ಮರುಪರಿಶೀಲಿಸಿ ಸಂಬಂಧಪಟ್ಟವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥ ಚಂದ್ರಮ ತಲ್ಲೂರು ಹಾಗೂ ದಲಿತ ಮುಖಂಡ ವೆಂಕಟ ಆಗ್ರಹಿಸಿದರು.

ಹಿಂದಿನ ಎರಡು ಮೂರು ಸಭೆಗಳಲ್ಲಿ ತಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಗಳು ಎಷ್ಟಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಲು ಕಂದಾಯ ಇಲಾಖೆಯ ಗ್ರಾಮಕರಣಿಕರ ಬಳಿ ಕೇಳಿದ್ದೆವು. ಆದರೆ ಇಲ್ಲಿಯವರೆಗೂ ಅವರಿಂದ ನಮಗೆ ಉತ್ತರಗಳು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಲ್ಲೂರು ಗ್ರಾಮಕರಣಿಕ ಹರೀಶ್, ಮುಂದಿನ ಸಭೆಗೆ ಮಾಹಿತಿ ನೀಡುವುದಾಗಿ ಹೇಳಿದರು. ಗ್ರಾಮಕರಣಿಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತೀ ಬಾರಿಯೂ ನಮಗೆ ನಿಮ್ಮಿಂದ ಇದೇ ಉತ್ತರ ಬರುತ್ತಿದೆ. ಈ ಭಾಗದಲ್ಲಿ ಬಲಾಡ್ಯರು ತಮ್ಮ ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದ್ದಾರೆ. ಅವರ ವಿರುದ್ದ ಯಾರೂ ಧ್ವನಿ ಎತ್ತುತ್ತಿಲ್ಲ. ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ದಲಿತ ಕುಟುಂಬಗಳು ಸ್ವಂತ ನಿವೇಶನ ಇಲ್ಲದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸರ್ಕಾರಿ ಭೂಮಿ ಹಾಗೂ ಡಿಸಿ ಮನ್ನಾ ಭೂಮಿ ಎಷ್ಟಿದೆ ಎನ್ನುವುದರ ಬಗ್ಗೆ ಲಕೆಕ್ಕ ಕೊಡಿ. ನಿಮಗೆ ಸಮಸ್ಯೆ ಇದ್ದರೆ ಹೇಳಿಬಿಡಿ ಎಂದರು.

ದಲಿತರ ನೀರಿನ ಟ್ಯಾಂಕ್ ದೇವಸ್ಥಾನದ ಶೌಚಾಲಯಕ್ಕೆ!:
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಕೊಟ್ಟ ನೀರಿನ ಟ್ಯಾಂಕ್ ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ಶೌಚಾಲಯದ ಮೇಲೆ ಇದೆ. ದಲಿತರಿಗಾಗಿ ಸರ್ಕಾರ ಕೊಟ್ಟ ನೀರಿನ ಟ್ಯಾಂಕ್ ಅನ್ನು ಪಂಚಾಯತ್ ದೇವಸ್ಥಾನಕ್ಕೆ ನೀಡಿದೆಯೋ ಅಥವಾ ಅದನ್ನು ಅವರು ಕದ್ದೊಯ್ದಿದ್ದಾರೊ ಎನ್ನುವುದು ಮೊದಲು ಸ್ಪಷ್ಪಪಡಿಸಿ. ಕೂಡಲೇ ದುರುಪಯೋಗವಾದ ಟ್ಯಾಂಕ್ ಅನ್ನು ಮರಳಿ ಪಮಚಾಯತ್ ವಶಕ್ಕೆ ಪಡೆಬೇಕು ಎಂದು ಗ್ರಾಂಸ್ಥ ಚಂದ್ರಮ ತಲ್ಲೂರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಈಗಾಗಲೇ ಪಂಚಾಯತ್ ಉಪಾಧ್ಯಕ್ಷರು ಸಂಬಂಧಪಟ್ಟ ದೇವಸ್ಥಾನದ ಮೊಕ್ತೇಸರರ ಗಮನಕ್ಕೆ ತಂದಿದ್ದಾರೆ. ಕೂಡಲೇ ಗ್ರಾ.ಪಂಗೆ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೌಕೂರು ಏತ ನೀರಾವರಿ ರಾಜಕೀಯ ಬಿಟ್ಟು ಸ್ಪಂದಿಸಿ: ಗ್ರಾಮಸ್ಥ ಚಂದ್ರಮ ತಲ್ಲೂರು ಮಾತನಾಡಿ, ಬಹುಕೋಟಿ ವೆಚ್ಚದ ಸೌಕೂರು ನೀರಾವರಿ ಯೋಜನೆಯಿಂದ ತಲ್ಲೂರು ಗ್ರಾ.ಪಂ ಅನ್ನು ಕೈ ಬಿಡಲಾಗಿದೆ. ಮೂಲ ಯೋಜನೆಯಲ್ಲಿ ತಲ್ಲೂರು ಪಂಚಾಯತ್ ಇದ್ದು, ಆ ಬಳಿಕ ರಾಜಕೀಯ ಹಿತಾಸಕ್ತಿಗಾಗಿ ಶಾಸಕರ ಮನೆ ಕಡೆ ಯೋಜನೆಯನ್ನು ತಿರುಗಿಸಲಾಗಿದೆ. ತಲ್ಲೂರು ಜನರಿಗಾದ ಅನ್ಯಾಯದ ವಿರುದ್ದ ಪಂಚಾಯತ್ ಮಾತನಾಡುತ್ತಿಲ್ಲ. ನೀರಿಗಾಗಿ ಹಾಹಾಕಾರ ಇರುವ ಉಪ್ಪಿನಕುದ್ರು ಭಾಗದ ಪಂಚಾಯತ್ ಸದಸ್ಯರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ನೀರಿನ ವಿಚಾರದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಂದಾಗಿ ನಿಯೋಗ ತೆರಳಿ ಸಂಬಂದಪಟ್ಟ ಶಾಸಕರು ಇಲಾಖೆಯ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದರು. ಪಮಚಾಯತ್ ನಿಯೋಗ ತೆರಳಿ ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯತ್ ನೀರು ಯೋಗ್ಯವಿಲ್ಲ, ಬೇರೆಯವರ ಬಾವಿ ಮುಟ್ಟುವಂತಿಲ್ಲ: ತಲ್ಲೂರು ವಿಶೇಷ ಗ್ರಾಮಸಭೆಯಲ್ಲಿ ಅಸ್ಪೃಶ್ಯತೆಯ ಅಳಲು

ತಲ್ಲೂರು ಗ್ರಾ.ಪಂನ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಪಂಚಾಯತ್ ನೀರು ಯೋಗ್ಯವಿಲ್ಲ ಎಂದು ಬೇರೆಯವರ ಮನೆಗೆ ಹೋದರೆ ಅಲ್ಲಿಯೂ ನಾವು ಅವರ ಬಾವಿ ಮುಟ್ಟುವಂತಿಲ್ಲ ಎಂದು ಕೋಟೆಬಾಗಿಲು ನಿವಾಸಿ ಕೊರಗ ಮಹಿಳೆ ಮುತ್ತು ತಾವು ಅನುಭವಿಸುತ್ತಿರುವ ಅಸ್ಪøಶ್ಯತೆಯ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಕೋಟೆಬಾಗಿಲಿನಲ್ಲಿರುವ ಸರ್ಕಾರಿ ಬಾವಿಯನ್ನು ಶೀಘ್ರವೇ ಶುಚಿಗೊಳಿಸಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡುತ್ತೇವೆ ಎಂದರು.

ತಲ್ಲೂರು ಗ್ರಾ.ಪಂ ಅಧ್ಯಕ್ಷೆ ಭೀಮವ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರೀಶ್ ಎಸ್ ನಾಯ್ಕ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು, ನೊಡೆಲ್ ಅಧಿಕಾರಿಯಾಗಿ ಉಪ್ಪಿನಕುದ್ರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಹಾಗೂ ಪಂಚಾಯತ್ ಸದಸ್ಯರು ಇದ್ದರು. ಸಭೆ ಆರಂಭಕ್ಕೂ ಮುನ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಧ್ಯಕ್ಷೆ ಭೀಮವ್ವ ಹೂಹಾರ ಹಾಕಿ ವಂದಿಸಿದರು. ಪಿಡಿಒ ನಾಗರತ್ನ ಸ್ವಾಗತಿಸಿ, ಕಾರ್ಯದರ್ಶಿ ರತ್ನ ವಂದಿಸಿದರು.


Spread the love