ಪಕ್ಕಲಡ್ಕ ಯುವಕ ಮಂಡಲ ರಾಜ್ಯಕ್ಕೆ ಮಾದರಿ ಸಂಸ್ಥೆ- ಪದ್ಮರಾಜ್ ಆರ್

Spread the love

ಪಕ್ಕಲಡ್ಕ ಯುವಕ ಮಂಡಲ ರಾಜ್ಯಕ್ಕೆ ಮಾದರಿ ಸಂಸ್ಥೆ- ಪದ್ಮರಾಜ್ ಆರ್

ಕಳೆದ 70 ವರುಷಗಳಿಂದ ಜನಪರ ಸೇವೆ ಸಲ್ಲಿಸಿ ಜಿಲ್ಲೆಯ ಗಮನ ಸೆಳೆದಿರುವ ಪಕ್ಕಲಡ್ಕ ಯುವಕ ಮಂಡಲಕ್ಕೆ ಸಮನಾದ ಸಂಸ್ಥೆ ಇನ್ನೊಂದಿಲ್ಲ. ಆ ಕಾಲಕ್ಕೆ ರಾತ್ರಿ ಶಾಲೆಯ ಮೂಲಕ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ನೀಡುವ ಮೂಲಕ ಪ್ರಾರಂಭಿಸಿದ ಪಯಣ ಇಂದು ಊಹೆಗೂ ಅಸಾಧ್ಯವಾದ ಜನಪರ ಕೆಲಸಗಳನ್ನು ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಪಕ್ಕಲಡ್ಕ ಯುವಕ ಮಂಡಲ ರೂಪುಗೊಂಡಿದೆ ಎಂದು ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ, ಯುವ ವಕೀಲರಾದ ಪದ್ಮರಾಜ್ ಆರ್ ಅವರು ನಿನ್ನೆ ಪಕ್ಕಲಡ್ಕ ಯುವಕ ಮಂಡಲ( ರಿ) ಇದರ 70 ನೇ ವಾರ್ಷಿಕೋತ್ಸವದ (ಪ್ಲಾಟಿನಂ ಜುಬಿಲಿ) ಸಭಾ ಕಾರ್ಯಕ್ರಮ, ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಮಾತನಾಡಿದರು.

ಪಕ್ಕಲಡ್ಕ ಯುವಕ ಮಂಡಲದ ಚಟುವಟಿಕೆಗಳನ್ನು ಗಮನಿಸುತ್ತಿದ್ದು ಬಡವರ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿರುವ ಈ‌ ಸಂಸ್ಥೆಯ ಸದಸ್ಯರ ಬದ್ದತೆ ನಿಜಕ್ಕೂ ಶ್ಲಾಘನೀಯ. ಸದ್ಯದ ಪ್ರಸಕ್ತ ಸನ್ನಿವೇಶದಲ್ಲಿ ತನ್ನದೇ ಸ್ವಾರ್ಥ ಸಮಾಜಕ್ಕಾಗಿ ಹಂಬಲಿಸುತ್ತಿರುವ ಯುವಜನ ವರ್ಗದ ನಡುವೆ ಯಾವುದೇ ಸ್ವಂತ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಸಮಾಜದ ಏಳಿಗೆಗಾಗಿ, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಪಕ್ಕಲಡ್ಕ ಯುವಕ ಮಂಡಲದ ನಡೆ ಮೆಚ್ಚುವಂತದ್ದೆ. ಇಂದಿನ ರಾಜಕೀಯ ವಿದ್ಯಮಾನದಲ್ಲಿ ಎಲ್ಲರೂ ಸಮೂಹ ಸನ್ನಿಗೊಳಗಾಗಿ ಮತೀಯವಾದದ ವಿಭಜನೆಯ ರಾಜಕಾರಣಕ್ಕೆ ಬಲಿಯಾಗುತ್ತಿರುವಾಗ ಕಳೆದ 70 ವರುಷಗಳಿಂದಲೂ ಜಾತ್ಯಾತೀತ ಪರಂಪರೆಯನ್ನು ಉಳಿಸಿ ಶಾಂತಿ ಸೌಹಾರ್ದತೆಯನ್ನು ಕಾಪಾಡುತ್ತಾ ಈ ಜಿಲ್ಲೆಗೆ ಜಾತ್ಯಾತೀತ ನಾಯಕರುಗಳನ್ನು, ಕಾರ್ಯಕರ್ತರುಗಳನ್ನು ತಯಾರುಗೊಳಿಸುವ ಪಕ್ಕಲಡ್ಕ ಯುವಕ ಮಂಡಲದಂತಹ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ಹುಟ್ಟುತ್ತಿರಬೇಕೆಂದು ಹೇಳಿದರು.

ವೇದಿಕೆಯಲ್ಲಿ ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ , ಕಾರ್ಮಿಕಪರ ಹೋರಾಟಗಾರ ಸುನೀಲ್ ಕುಮಾರ್ ಬಜಾಲ್ ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಾರ್ಷಿಕೋತ್ಸವದ ಆಚರಣಾ ಸಮಿತಿಯ ಗೌರವಾಧ್ಯಕ್ಷರು, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ವಹಿಸಿದ್ದರು.

ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಶಾಫೀ ಆಯುರ್ವೇದಿಕ್ ನರ್ಸಿಂಗ್ ಹೋಮ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಾಕ್ಟರ್ ಜೈನುದ್ದೀನ್‌, ಬಂಟ್ವಾಳ ಪುರಸಭೆಯ ಮಾಜಿ ಸದಸ್ಯರಾದ ಪ್ರವೀಣ್ ಬಂಟ್ವಾಳ, ಕಾರ್ಮಿಕ ಮುಖಂಡರಾದ ಕೆ ಯಾದವ ಶೆಟ್ಟಿ, ಯುವ ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ, ಅಸುಂತಾ ಡಿಸೋಜ, ಜಪ್ಪಿನಮೊಗರು ಗ್ರಾಮ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಉದಯಚಂದ್ರ ರೈ, ಜನತಾ ವ್ಯಾಯಾಮ‌ ಶಾಲೆಯ ಅಧ್ಯಕ್ಷರಾದ ಕೇಶವ ಭಂಡಾರಿ, ಪಕ್ಕಲಡ್ಕ ಯುವಕ ಮಂಡಲ ಅಧ್ಯಕ್ಷರಾದ ದೀಪಕ್ ಬಜಾಲ್ , ಆಚರಣಾ ಸಮಿತಿ ಅಧ್ಯಕ್ಷರಾದ ಸಂತೋಷ್ ಬಜಾಲ್, ಕಾರ್ಯಾಧ್ಯಕ್ಷರಾದ ಬಿ ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.
ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್ ಸ್ವಾಗತಿಸಿ, ಆಚರಣಾ ಸಮಿತಿ ಕಾರ್ಯದರ್ಶಿ ನಾಗರಾಜ್ ಬಜಾಲ್ ನಿರೂಪಿಸಿದರು.


Spread the love