
ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ನೀಡದ ಬಿಜೆಪಿ ಸರಕಾರ ಸಾಮಾನ್ಯರಿಗೆ ನೀಡಿತೇ? – ದೀಪಕ್ ಕೋಟ್ಯಾನ್
ಉಡುಪಿ: ದಕ, ಉಡುಪಿ ಜಿಲ್ಲೆಗಳಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಸಹಿತ ಹಿಂದೂ ಸಂಘಟನೆಗಳ ಕಾರ್ಯಕರ್ತರ, ಇತರ ಧರ್ಮದ ಅಮಾಯಕ ಜೀವಗಳು ಕೊಲೆಯಾಗುತ್ತಿರುವುದು ಆಡಳಿತಾರೂಡ ಬಿಜೆಪಿ ಸರಕಾರದಲ್ಲಿ ಸ್ವತಃ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಸಾಧ್ಯವಾಗದವರು ಇತರರನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಕಡಿದು ಕೊಲೆ ಮಾಡಿರುವುದು ಖಂಡನೀಯ. ತಿಂಗಳಿಗೆ ಎರಡರಂತೆ ಕೊಲೆಯಾಗುತ್ತಿರುವುದು ರಾಜ್ಯದ ಗೃಹ ಇಲಾಖೆಯ ವೈಫಲ್ಯ ಎತ್ತಿ ತೋರಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ಇಂದು ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ ಮಾಡಿದವರು ಯಾವುದೇ ಧರ್ಮಕ್ಕೆ ಸೇರಿದ್ದರೂ ಸಹ ಅವರ ವಿರುದ್ದ ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳಲು ಇದುವರೆಗೂ ಸರಕಾರ ವಿಫಲವಾಗಿದೆ.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಕೊಲೆಯಾದ ಬಳಿಕ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದಕೊಂಡ ಬಿಜೆಪಿ ಸರಕಾರ ಅದೇ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡುವ ವೀಡಿಯೋ ಬಂದಾಗ ಅಂತಹ ಜೈಲಿನ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಸಹ ಮೀನ ಮೇಷ ಎಣಿಸುತ್ತಿದೆ.
ಈ ಹಿಂದೆ ಭಟ್ಕಳದಲ್ಲಿ ಪರೇಶ್ ಮೇಶ್ತ ಎಂಬ ಅಮಾಯಕ ಯುವಕ ಕೊಲೆಯಾದಾಗ ಅದನ್ನೇ ಚುನಾವಣಾ ವಿಷಯವನ್ನಾಗಿ ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಗರಿಗೆ ಇಂದಿಗೂ ಸಹ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ನಡೆದಿಲ್ಲ.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಹಿಂದೂಗಳ ಕೊಲೆಯಾಗುತ್ತಿದೆ, ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದೆಲ್ಲಾ ಬೊಬ್ಬಿಡುತ್ತಿದ್ದ ಬಿಜೆಪಿಗರು ಈಗೇಕೆ ಮೌನವಾಗಿದ್ದಾರೆ. ಬಿಜೆಪಿ ಸರಕಾರದಲ್ಲಿ ಇದುವರೆಗೆ ಕೊಲೆಯಾದ ಜೀವಗಳಿಗೆ ಬೆಲೆ ಇಲ್ಲವೇ? ಅಥವಾ ಚುನಾವಣೆ ಹತ್ತಿರ ಬರುವಾಗ ಹೆಣ ರಾಜಕೀಯ ಮಾಡಿ ಓಟು ಗಳಿಸುವ ತಂತ್ರ ಬಿಜೆಪಿ ಹೊಂದಿದೆಯೇ?
ರಾಜ್ಯದಲ್ಲಿ ಒರ್ವ ವಿಫಲ ಗೃಹಮಂತ್ರಿಯನ್ನು ಹೊಂದಿದ್ದು ಅವರಿಂದ ಕೊಲೆಗಡುಕರ ವಿರುದ್ದ ಯಾವುದೇ ರೀತಿಯ ಕಠಿಣ ಕ್ರಮ ನಿರೀಕ್ಷಿಸುವುದು ಸಾಧ‍್ಯವಿಲ್ಲ ಅವರು ಕೇವಲ ಹೇಳಿಕೆ ನೀಡುವುದು ಬಿಟ್ಟರೆ ಇದುವರೆಗೆ ಅವರಿಂದ ಯಾವುದೇ ರೀತಿಯ ಕಠಿಣ ಕ್ರಮ ನಡೆದಿರುವುದು ಕಂಡುಬಂದಿಲ್ಲ. ಇಂತಹ ಲಜ್ಜೇಗೇಡಿ ಸರಕಾರದ ವಿರುದ್ದ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವುದು ಖಂಡಿತ.
ಪ್ರವೀಣ್ ನೆಟ್ಟಾರು ಕೊಲೆಗೆ ಕಾರಣರಾದ ಹಾಗೂ ಇದುವರೆಗೆ ರಾಜ್ಯದಲ್ಲಿ ಕೊಲೆಯಾದ ಅಮಾಯಕ ಹಿಂದೂ ಮತ್ತು ಮುಸ್ಲಿಂರ ಸಾವಿಗೆ ನ್ಯಾಯ ದೊರಕಿಸುವ ಕೆಲಸ ರಾಜ್ಯ ಸರಕಾರ ಕೂಡಲೇ ಮಾಡಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.