ಪಕ್ಷದ‌ ಕಾರ್ಯಕರ್ತರೇ ನನಗೆ ಆಸ್ತಿ : ಮಾಜಿ ಶಾಸಕ ಕೆ ಗೋಪಾಲ ಪೂಜಾರಿ

Spread the love

ಪಕ್ಷದ‌ ಕಾರ್ಯಕರ್ತರೇ ನನಗೆ ಆಸ್ತಿ : ಮಾಜಿ ಶಾಸಕ ಕೆ ಗೋಪಾಲ ಪೂಜಾರಿ

ಕುಂದಾಪುರ: ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಸೃಷ್ಠಿಯಾಗಿದೆ. ಇದನ್ನು ಯಥಾಸ್ಥಿತಿ ಉಳಿಸಿಕೊಂಡು ಹೋಗುವಲ್ಲಿ ನಿಮ್ಮೆಲ್ಲರ ಸಹಕಾರ ಬೇಕಾಗಿದೆ. ಕಾಂಗ್ರೆಸ್ ಪಕ್ಷ ಕಟ್ಟುವ ಪ್ರಯತ್ನಕ್ಕೆ ನೀವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡಿದರೆ ಮತ್ತೆ ನಾವು ಗದ್ದುಗೆ ಹಿಡಿಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು.

ಹೆಮ್ಮಾಡಿ ಸಮೀಪದ ಕಟ್‍ಬೇಲ್ತೂರಿನ ಅವರ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ವಂಡ್ಸೆ ಹಾಗೂ ಬೈಂದೂರು ಬ್ಲಾಕ್ ಸಮಿತಿಯ ಜಂಟಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಪಕ್ಷದ ಕಾರ್ಯಕರ್ತರೇ ನಮ್ಮಂತಹ ನಾಯಕರಿಗೆ ಆಸ್ತಿ. ಕಾರ್ಯಕರ್ತರನ್ನು ನಂಬಿ ನಾವು ರಾಜಕೀಯ ಮಾಡುತ್ತೇವೆ. ನೀವಿಲ್ಲದೇ ಇದ್ದರೆ ನಾವು ರಾಜಕೀಯ ಮಾಡಲು ಸಾಧ್ಯವೇ ಇಲ್ಲ. ರಾಜಕೀಯ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ. ಏನೇ ಕಳೆದುಕೊಂಡರೂ ನನಗೆ ನನ್ನ ಪಕ್ಷದ ಕಾರ್ಯಕರ್ತರೆ ಆಸ್ತಿ ಎಂದರು.

ಸಿದ್ದರಾಮಯ್ಯನವರ ಅಮೃತಮಹೋತ್ಸವ ಹಾಗೂ ಸ್ವಾತಂತ್ರ್ಯ ನಡಿಗೆ ಎರಡೂ ಕಾರ್ಯಕ್ರಮವನ್ನು ಕಾರ್ಯಕರ್ತರು ಯಶಸ್ವಿಗೊಳಿಸುವ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರ ಶಕ್ತಿ ಏನೆಂಬುವುದನ್ನು ತೋರಿಸಿಕೊಡಬೇಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆಯಾಗಿ ಹೋಗಿ ಪಕ್ಷ ಕಟ್ಟುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಮಾಧ್ಯಮಗಳು ಮಾತ್ರ ಅವರನ್ನು ಬೇರೆ ಬೇರೆ ಮಾಡುತ್ತಿದೆ ಎಂದು ಪೂಜಾರಿ ಹೇಳಿದರು.

ನಿಮ್ಮೆಲ್ಲರ ಆಶೀರ್ವಾದದಿಂದ ಗುಣಮುಖನಾಗುತ್ತಿದ್ದೇನೆ: ಪೂಜಾರಿ ಗದ್ಗದಿತ
ಕಾಲಿನ ಶಸ್ತø ಚಿಕಿತ್ಸೆಗೊಳಗಾಗಿ ಕಳೆದ ಎರಡು ತಿಂಗಳಿಗೂ ಮಿಕ್ಕಿ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದೇನೆ. ಮನೆಗೆ ಯಾರೂ ಬರಬೇಡಿ ಎಂದರೂ ಅಪಾರ ಸಂಖ್ಯೆಯಲ್ಲಿ ಬಂದು ನನ್ನ ಆರೋಗ್ಯವನ್ನು ವಿಚಾರಿಸಿ ಹೋಗಿದ್ದೀರಿ. ನಿಮ್ಮೆಲ್ಲರ ಕಾಳಜಿ, ಪ್ರೀತಿ, ಆಶೀರ್ವಾದದಿಂದ ಬೇಗ ಗುಣಮುಖನಾಗುತ್ತಿದ್ದೇನೆ. ಇಂದು ನಿಮ್ಮೆದುರು ನಿಂತು ಮಾತನಾಡುವಂತಹ ಶಕ್ತಿ, ಧೈರ್ಯವನ್ನು ನೀವೆಲ್ಲರೂ ನೀಡಿದ್ದೀರಿ ಎಂದು ಸಭೆಯಲ್ಲಿ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಗದ್ಗದಿತರಾದರು.

ನಿಮ್ಮೆಲ್ಲರ ಪ್ರೀತಿ, ಕಾಳಜಿ, ಅಂತರಾಳದ ಮಾತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಪಕ್ಷ ಕಟ್ಟುವ ಜೊತೆಗೆ ಕಾರ್ಯಕರ್ತರನ್ನು ಅಣಿಗೊಳಿಸುವ ಕೆಲಸಕ್ಕೆ ಮುಂದಾಗುತ್ತೇನೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಹಿರಿಯ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ಮುಖಂಡರಾದ ಪ್ರಕಾಶ್ಚಂದ್ರ ಶೆಟ್ಟಿ, ರಘುರಾಮ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ದೇವಾನಂದ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವಿಕಾಸ್ ಹೆಗ್ಡೆ, ನಾಗರಾಜ್ ಗಾಣಿಗ ಬೈಂದೂರು, ಜಯರಾಮ್ ನಾಯಕ್, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಮತ್ತು ವಂಡ್ಸೆ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಬೈಂದೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.


Spread the love