ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ದಾರಿ ದೀಪವಾಗಲಿ: ಕನ್ಯಾನ ಸದಾಶಿವ ಶೆಟ್ಟಿ

Spread the love

ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ದಾರಿ ದೀಪವಾಗಲಿ: ಕನ್ಯಾನ ಸದಾಶಿವ ಶೆಟ್ಟಿ
 

ಮಂಗಳೂರು: ಕಲಾವಿದರ ಕಷ್ಟಗಳನ್ನು ಅರಿತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೆಲಸ ಮಾಡುತ್ತಿದೆ. ಯಕ್ಷಗಾನ ಬೆಳೆಯಬೇಕು, ಕಲಾವಿದರು ಉಳಿಯ ಬೇಕು. ಈ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ದಾರಿ ದೀಪವಾಗಲಿ. ರಾತ್ರಿ ಹೊತ್ತು ನಿದ್ದೆಗೆಟ್ಟು ರಂಗಸ್ಥಳದಲ್ಲಿ ಕುಣಿದಾಡುವ ಕಲಾವಿದರ ಯೋಗಕ್ಷೇಮ ವಿಚಾರಿಸುವ ಫೌಂಡೇಶನ್ ನ ಕಾರ್ಯ ಶ್ಲಾಘನೀಯ. ಕಲೆಗೆ ಬೆಲೆ ಕೊಟ್ಟು ಕಲಾವಿದರನ್ನು ಸಶಕ್ತರನ್ನಾಗಿಸುವ ಕೆಲಸ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ನಡೆಯಲಿ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ, ಮುಂಬಯಿ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ತಿಳಿಸಿದರು.

ಕಂಕನಾಡಿ ಗರೋಡಿ ಬಳಿಯ ಅಟ್ಟಣೆ ಹೊಟೇಲ್ ಸಭಾಂಗಣದಲ್ಲಿ ನಡೆದ ಯಕ್ಷಾಶ್ರಯ ಯೋಜನೆಯಡಿಯಲ್ಲಿ ನಾಲ್ವರು ಕಲಾವಿದರಿಗೆ ಮನೆ ಕಟ್ಟಲು ತಲಾ ರೂ.೨ ಲಕ್ಷ ಸಹಾಯಧನ  ನೀಡಿ ಮಾತನಾಡಿದರು.
ಪಟ್ಲ ಫೌಂಡೇಶನ್ ಸಂಸ್ಥೆಯನ್ನು ಇನ್ನಷ್ಟು ಆರ್ಥಿಕವಾಗಿ ಬಲಾಡ್ಯಗೊಳಿಸುವ ಕೆಲಸ ಆಗಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರದ ಅಗತ್ಯ ಇದೆ. ಅದೇ ರೀತಿ ರಾತ್ರಿ   ನಿದ್ದೆಗೆಟ್ಟು ದುಡಿಯುವ  ಕಲಾವಿದರ ಬಗ್ಗೆ ಯಕ್ಷಗಾನ ಮೇಳದ ಕಲಾವಿದರೂ ಗಮನಹರಿಸ ಬೇಕು. ಕಲಾವಿದರಿಗೆ ಸಂಬಳ ಮತ್ತಿತರ ಸೌಲಭ್ಯದ ಬಗ್ಗೆ ಯಜಮಾನರು ಗಮನಹರಿಸುವಂತಾಗಲಿ. ಯಕ್ಷಗಾನ ಬಹುದೊಡ್ಡ ಕಲೆ. ಇದನ್ನು ಉಳಿಸುವ ಕೆಲಸವಾಗಲಿ. ಅಶಕ್ತರಿಗೆ ಸಹಾಯ ಧನ ಯೋಜನೆ ಇದು ನಿತ್ಯ ನಿರಂತರ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ನಡೆಯಲಿದೆ ಎಂದು ಶುಭ ಹಾರೈಸಿದರು.
ಮನುಷ್ಯತ್ವ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ: ಐಕಳ
ವೇದಿಕೆಯಲ್ಲಿದ್ದ  ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಮಾಜ ಸೇವೆ ಎಂದಾಗ ಜಾತಿಯನ್ನು ಬದಿಗಿರಿಸಿ ಮನುಷ್ಯತ್ವ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ಸರಕಾರಕ್ಕೂ ಮಾಡಲು ಸಾಧ್ಯವಾಗದ ಕೆಲಸವನ್ನು ಕಲಾವಿದರಿಗಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ಕೆಲಸ ಮಾಡುತ್ತಿದೆ. ಫೌಂಡೇಶನ್ ಗೆ ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕನ್ಯಾನ ದೇವರಂತೆ ಒದಗಿ ಬಂದಿದ್ದಾರೆ. ಇದು ಫೌಂಡೇಶನ್ ಮತ್ತು ಕಲಾವಿದರ ಪುಣ್ಯ. ಪಟ್ಲ ಫೌಂಡೇಶನ್ ಟ್ರಸ್ಟ್ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಧ್ಯೆಯೋದ್ದೇಶ ಒಂದೇ ಅಗಿರುತ್ತದೆ. ಬಡವರ ನೆರವಿಗಾಗಿ  ಬೇಡುವುದು ಮತ್ತು ಕೊಡುವುದು. ಹೀಗಾಗಿ ಕಲಾವಿದರ ಪಾಲಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳಕಾಗಿದೆ. ಹೃದಯ ಸಂಪತ್ತು ಇರುವವರೆಲ್ಲರೂ  ಟ್ರಸ್ಟ್ ಗೆ ಶಕ್ತಿ ತುಂಬುವ ಕೆಲಸ ಮಾಡಲಿ ಎಂದವರು ತಿಳಿಸಿದರು.
ಪ್ರಾಸ್ತಾವಿಕವಾಗಿ  ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಫೌಂಡೇಶನ್ ಟ್ರಸ್ಟ್ ಕಳೆದ ಆರು ವರ್ಷಗಳ ಅವಧಿಯಲ್ಲಿ ಈ ವರೆಗೆ ವಿವಿಧ ಯೋಜನೆಗಳಡಿಯಲ್ಲಿ ಎಂಟೂವರೆ ಕೋಟಿ ರೂಪಾಯಿಗೂ ಮಿಕ್ಕಿ ಸಹಾಯ ಧನವನ್ನು ಕಲಾವಿದರಿಗೆ ಮಾಡಿದೆ.  ಸದಾಶಿವ ಶೆಟ್ಟಿ ಕನ್ಯಾನ ಮತ್ತು ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂದಿನ ದಿನಗಳಲ್ಲಿ ಮಹತ್ತರ ಯೋಜನೆಗಳನ್ನು ರೂಪಿಸಲಿದೆ ಎಂದರು.
ಮನೆಕಟ್ಟಲು ನೆರವು
ಕಮಲ ಶಿಲೆ ಮೇಳದ ಲಕ್ಷಣ ಭಂಡಾರಿ, ಮಾರಣಕಟ್ಟೆ ಮೇಳದ ತಿಮ್ಮಪ್ಪ ದೇವಾಡಿಗ, ಮಂದಾರ್ತಿ ಮೇಳದ ನರಸಿಂಹ ನಾಯಕ್ ಮತ್ತು ಪೊಳಲಿಯ ಚಂದ್ರಹಾಸ ಪೂಜಾರಿ ಅವರಿಗೆ ಮನೆಕಟ್ಟಲು ತಲಾ ಎರಡು ಲಕ್ಷ ರೂಪಾಯಿಯನ್ನು ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟ್ ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್  ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಡಾ.ಮನು ರಾವ್ ವಂದಿಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ಟ್ರಸ್ಟಿಗಳು ವಲಯ ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Spread the love