
ಪಡಕೊಂಡ ಎರಡು ಪಟ್ಟು ಸಮಾಜಕ್ಕೆ ಹಿಂತಿರುಗಿಸುವುದು ಅವಶ್ಯಕ: ಬಿಷಪ್ ಅಲೋಶಿಯಸ್ ಡಿ’ಸೋಜ
ಕೆನರಾ ಕಥೊಲಿಕ್ ಎಜುಕೇಶನಲ್ ಕೋ-ಆಪರೇಟಿವ್ ಸೊಸೈಟಿಯು ತನ್ನ 75ನೆಯ ವಾರ್ಷಿಕೋತ್ಸವ ಆಚರಣೆಯನ್ನು ಸಂತ ಆಲೋಶಿಯಸ್ ಹೈಸ್ಕೂಲಿನ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ನಿವೃತ್ತ ಬಿಷಪ್ ಅತೀ ವಂದನೀಯ ಅಲೋಶಿಯಸ್ ಪಾವ್ ಡಿ’ಸೋಜ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡುತ್ತಾ, ಇಂದು ಹಲವು ಸಂಘ-ಸಂಸ್ಥೆಗಳು, ಉದಾರ ದಾನಿಗಳು ಶ್ರಮಪಟ್ಟು ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ವಿಶೇಷ ಸಹಾಯಹಸ್ತವನ್ನು ನೀಡುತ್ತಾ ಬಂದಿರುತ್ತಾರೆ. ಆದರೆ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಕೆಲಸಕ್ಕೆ ಸೇರಿದ ನಂತರ ಎಲ್ಲವನ್ನೂ ಮರೆತು ಬಿಡುವುದು ಆಘಾತಕಾರಿ ಬೆಳವಣಿಗೆಯನ್ನು ಕಾಣುತ್ತಿವೆ. ಆದುದರಿಂದ ವಿದ್ಯಾರ್ಥಿಗಳು ತಾವು ಜೀವನದಲ್ಲಿ ಹೇಗೆ ಪರರ ಸಹಾಯವನ್ನು ಪಡೆದಿದ್ದೇವೆಯೋ ಮುಂದಿನ ದಿನಗಳಲ್ಲಿ ನೀವು ಕೂಡ ಪಡಕೊಂಡಕ್ಕಿಂತ ಎರಡು ಪಟ್ಟು ಸಮಾಜಕ್ಕೆ ನೀಡಬೇಕೆಂದು ಕರೆ ಕೊಟ್ಟರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಅತೀ ವಂದನೀಯ ಮೆಲ್ವಿನ್ ಜೆ. ಪಿಂಟೊರವರು ಮಾತನಾಡಿ, ಯಾವುದೇ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಈ ದೃಷ್ಟಿಯಿಂದ ನಮ್ಮ ಸಂತ ಅಲೋಶಿಯಸ್ ಶಿಕ್ಷಣ ಸಮೂಹ ಸಂಸ್ಥೆ ಕೂಡಾ ಮುತುವರ್ಜಿ ವಹಿಸುತ್ತದೆ. ಈ ಸೊಸೈಟಿ ಕೂಡಾ ಕಳೆದ 75 ವರ್ಷಗಳಿಂದ ಶಿಕ್ಷಣಕ್ಕೆ ನೀಡಿದ ಸೇವೆ ಅವಿಸ್ಮರಣೀಯ ಎಂದು ಹೇಳಿದರು.
ಇನ್ನೋರ್ವ ಗೌರವ ಅತಿಥಿಗಳಾದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಯುತ ರೋಮ್ ಕಾಸ್ತೆಲಿನೊ ಮಾತನಾಡಿ, ಸೊಸೈಟಿಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ತಮ್ಮದೇ ರೀತಿಯಲ್ಲಿ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅಂತಹದರಲ್ಲಿ ಬಹಳ ಹಳೆಯ ಸೊಸೈಟಿಯು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ ನೀಡಿ ಇಂದು ಅತ್ಯಂತ ಉನ್ನತ ಹುದ್ದೆಗಳಲ್ಲಿ ಅಲಂಕರಿಸುವುದು ನಮ್ಮ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಕೊಟ್ಟ ದೊಡ್ಡ ಉಡುಗೊರೆಯಾಗಿದೆ. ಮುಂದೆ ಕೂಡಾ ಈ ಸೊಸೈಟಿ ಉನ್ನತ ಶಿಖರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸೊಸೈಟಿಯ ಸದಸ್ಯರು ಹಾಗೂ ಗ್ರಾಹಕರಾಗಿ ಉನ್ನತ ಶಿಕ್ಷಣ ಪಡೆದು ವಕೀಲ ವೃತ್ತಿ ಪ್ರಾರಂಭಿಸಿ ಪ್ರಸ್ತುತ ಯಶಸ್ವಿ ವಕೀಲರಾದ ಎಂ.ಪಿ. ನೊರೊನ್ಹಾರವರು ಮಾತನಾಡಿ, ಸುಮಾರು 40-50 ವರ್ಷಗಳ ಹಿಂದೆ ಶಿಕ್ಷಣಕ್ಕೆ ಪ್ರತ್ಯೇಕವಾಗಿ ಪ್ರೋತ್ಸಾಹಿಸುವಂತಹ ಸಂಸ್ಥೆ ಇದಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ದೀಪವಾಗಿ ಬೆಳಕನ್ನು ನೀಡಿದೆ ಎಂದು ಹೇಳಿದರು.
ಸಂಸ್ಥೆಯು ಕಳೆದ 75 ವರ್ಷಗಳಲ್ಲಿ ಸೇವೆಗೈದ ಪದಾಧಿಕಾರಿಗಳಿಗೆ, ನಿರ್ದೇಶಕರಿಗೆ, ಸಹಕಾರ ನೀಡುತ್ತಿರುವ ಹಿತಚಿಂತಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮೊದಲಿಗೆ ಸೊಸೈಟಿಯ ಅಧ್ಯಕ್ಷರಾದ ರುಡಾಲ್ಫ್ ಡಿ’ಸಿಲ್ವ ಸ್ವಾಗತಿಸಿ, ಉಪಾಧ್ಯಕ್ಷರಾದ ಸುಶೀಲ್ ನೊರೊನ್ಹಾ ಧನ್ಯವಾದಗೈದರು. ಗೌರವ ಕಾರ್ಯದರ್ಶಿ ಶ್ರೀ ಓಸ್ವಲ್ ಡಿ’ಕುನ್ಹ ಸಂಸ್ಥೆಯ ಕಿರು ಪರಿಚಯ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಡೊ ಐವನ್ ಪಿಂಟೊರವರು ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಐರಿನ್ ಫೆರ್ನಾಂಡಿಸ್ ನಿರೂಪಿಸಿದರು. ನಿರ್ದೇಶಕರಾದ ಸಿಂತಿಯಾ ಫರಾಯಸ್, ಶಾಂತಿ ರಸ್ಕಿನ್ಹಾ, ಜೋಸೆಫ್ ರೇಗೊ, ಲಾರೆನ್ಸ್ ಪಿಂಟೊ, ನೋವೆಲ್ ಲೋಬೊ, ಸುನಿಲ್ ವಾಸ್, ಜೇಮ್ಸ್ ಮಾಡ್ತ ಉಪಸ್ಥಿತರಿದ್ದರು.