
ಪಡುಕೋಣೆ ಕೋಟೆಗುಡ್ಡೆ ಪ್ರಾಥಮಿಕ ಶಾಲೆ ಶಿಕ್ಷಕರ ವರ್ಗಾವಣೆ ಆದೇಶ ವಾಪಾಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ: ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ ಹೆಚ್ಚುವರಿ ನೆಪವೊಡ್ಡಿ ಓರ್ವ ಶಿಕ್ಷಕರನ್ನು ವರ್ಗಾವಣೆಗೊಳಿಸಿದೆ. ಕನ್ನಡ ಶಾಲೆಯಿಂದ ಕನ್ನಡ ಶಿಕ್ಷಕರನ್ನೇ ವರ್ಗಾಯಿಸಿರುವ ಶಿಕ್ಷಣ ಇಲಾಖೆಯ ಕ್ರಮ ಖಂಡನೀಯ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಶಿಕ್ಷಕರನ್ನು ಉಳಿಸಿಕೊಳ್ಳಲು ಶಾಲಾಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಕೈಗೊಂಡ ನಿರ್ಣಯಕ್ಕೆ ಶಿಕ್ಷಣಾಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಶಿಕ್ಷಕರ ವರ್ಗಾವಣೆ ಆದೇಶ ವಾಪಾಸ್ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಪಡುಕೋಣೆ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಪಡುಕೋಣೆ ಎಚ್ಚರಿಕೆ ನೀಡಿದರು.
ಕನ್ನಡ ಶಿಕ್ಷಕಿ ವರ್ಗಾವಣೆಯನ್ನು ವಿರೋಧಿಸಿ ಶುಕ್ರವಾರ ಪಡುಕೋಣೆ (ಕೋಟೆಗುಡ್ಡೆ) ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಎಸ್ಡಿಎಂಸಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಪೋಷಕರಿಂದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮುಖ್ಯಶಿಕ್ಷಕರನ್ನು ನೇಮಿಸುತ್ತೇವೆ ಎಂದು ಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ. ಆದರೆ ಸರ್ಕಾರದ ನಿಯಮದ ಪ್ರಕಾರ 59 ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕರನ್ನು ನೇಮಿಸಲು ಸಾಧ್ಯವಿಲ್ಲ. ಸುಳ್ಳು ಭರವಸೆಯನ್ನು ನೀಡಿ ಶಿಕ್ಷಕಿಯನ್ನು ವರ್ಗಾವಣೆ ಮಾಡುತ್ತಿರುವ ಧೋರಣೆಯನ್ನು ಗಮನಿಸಿದರೆ ಶಿಕ್ಷಣ ಇಲಾಖೆಯು ಕನ್ನಡ ಶಾಲೆಗಳಿಗೆ ಎಷ್ಟು ಮಹತ್ವ ಕೊಡುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಮುಖ್ಯ ಶಿಕ್ಷಕರ ಹುದ್ದೆ ಖಾಲಿಯಾಗಿ ಅನೇಕ ವರ್ಷಗಳೇ ಕಳೆದಿದೆ. ಈಗ 59 ಮಕ್ಕಳು ಮಾತ್ರ ಇರುವುದರಿಂದ ಭರ್ತಿ ಮಾಡಲು ಕೊರತೆಯೂ ಇದೆ. ಈ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು ಎಂದವರು ಒತ್ತಾಯಿಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಜ್ಯೋತಿ ಮಾತನಾಡಿ, ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈಗ ಇಲಾಖೆ ಕೈಗೊಂಡಿರುವ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಎಸ್ಡಿಎಂಸಿ ಸದಸ್ಯರೆಲ್ಲ ಸಾಮೂಹಿಕವಾಗಿ ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಮಕ್ಕಳು ತರಗತಿಯನ್ನು ಬಹಿಷ್ಕರಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ನಮಗೆ ಹಿಂದೆ ಇದ್ದ ಕನ್ನಡ ಶಿಕ್ಷಕಿಯನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಘೋಷಣೆ ಕೂಗಿ, ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.
ಪ್ರತಿಭಟನೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಶ್ವನಾಥ ಪಡುಕೋಣೆ, ಕಾರ್ಯದರ್ಶಿ ಕಿರಣ್ ಗಾಣಿಗ, ಸದಸ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು.
ಬೇಡಿಕೆಗಳೇನು?
* 2021-22ನೇ ಸಾಲಿನ ಅವೈಜ್ಞಾನಿಕ ಹೆಚ್ಚುವರಿ ಪಟ್ಟಿಯನ್ನು ಇಲಾಖೆಯು ಕೂಡಲೇ ರದ್ದುಗೊಳಿಸಬೇಕು. ರಾಜ್ಯದ ಯಾವುದೇ ಶಾಲೆಯ ಹೆಚ್ಚುವರಿ ಪಟ್ಟಿ ಮಾಡುವುದಾದಲ್ಲಿ ಪ್ರಸಕ್ತ ಸಾಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಪಟ್ಟಿ ಮಾಡಬೇಕು.
* ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೀಡುವ ಬದಲು ತರಗತಿಗಳನ್ನು ಪರಿಗಣಿಸಿ, ಶಿಕ್ಷಕರನ್ನು ನೀಡಬೇಕು.
* ಒಂದು ಹುದ್ದೆ ಭರ್ತಿಯಾಗದೇ, ಮತ್ತೊಂದು ಹುದ್ದೆ ಹೆಚ್ಚುವರಿ ಮಾಡದಿರುವುದು.
* ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರನ್ನು ಇಟ್ಟು, 8ನೇ ತರಗತಿ ಪ್ರೌಢ ಶಿಕ್ಷಕರನ್ನು ಪ್ರೌಢಶಾಲೆಗೆ ವರ್ಗಾಯಿಸುವುದು.
* ಸರಕಾರಿ ಶಾಲೆಯ ವಾಹನಗಳು ಇನ್ನೊಂದು ಸರಕಾರಿ ಶಾಲಾ ವ್ಯಾಪ್ತಿಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಇದರಿಂದ ಇನ್ನುಳಿದ ಸರಕಾರಿ ಶಾಲೆಗಳಿಗೆ ಅನ್ಯಾಯ ಮಾಡಿದಂತೆ.