ಪತ್ನಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕುಡುಕ ಪತಿ!

Spread the love

ಪತ್ನಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಕುಡುಕ ಪತಿ!

ಕುಂದಾಪುರ: ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಲು ತವರು ಮನೆಯಿಂದ ಬಂದಿದ್ದ ಪತ್ನಿಯನ್ನು ಕುಡಿದ ಮತ್ತಿನಲ್ಲಿ ಕೊಲೆಗೈದ ಪತಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಇಲ್ಲಿನ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

 

ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೂಲತಃ ಸೊರಬ ನಿವಾಸಿ ಆಗಿರುವ ಪೂರ್ಣಿಮಾ ಆಚಾರ್ಯ ಅವರು ಕಳೆದ ಹದಿನಾರು ವರ್ಷಗಳ‌ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯ ಅವರೊಂದಿಗೆ ವಿವಾಹವಾಗಿದ್ದರು‌. ಟಿಪ್ಪರ್ ಚಾಲಕನಾಗಿರುವ ರವಿ ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ ಎರಡು ಮಕ್ಕಳೊಂದಿಗೆ ಮೊದಲು ಇಲ್ಲಿಯೇ ನೆಲೆಸಿದ್ದರು. ಅತೀಯಾದ ಕುಡಿತದ ಚಟ ಹೊಂದಿರುವ ರವಿ ಕುಡಿದು ಆಗಾಗ್ಗೆ ಗಲಾಟೆ ಮಾಡುತ್ತಿದ್ದು, ಪತ್ನಿಗೂ ಕಿರುಕುಳ ನೀಡುತ್ತಿದ್ದನು. ಈ ಹಿನ್ನೆಲೆ ಮನೆಯವರು ಮಾತುಕತೆ ನಡೆಸಿ ಆ ಬಳಿಕ ಪತಿಯಿಂದ‌ ದೂರ ಉಳಿದುಕೊಂಡಿದ್ದ ಪತ್ನಿ ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.

ಸೀಮಂತಕ್ಕೆ ಬಂದು ಹೆಣವಾದ ಪೂರ್ಣಿಮಾ:
ಭಾನುವಾರ ಹೆಮ್ಮಾಡಿ ಸಮೀಪದಲ್ಲಿ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಪೂರ್ಣಿಮಾ ಬಂದಿದ್ದರು. ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದು, ಪೂರ್ಣಿಮಾ ಕಾರ್ಯಕ್ರಮ‌ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿ ತಮ್ಮ‌ತಾಯಿಗೆ ಮಾಹಿತಿ‌ ನೀಡಿದ್ದರು. ರಾತ್ರಿ ಪತಿ ಪತ್ನಿ ಮಧ್ಯೆ ಜಗಳವಾಗಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಿರಂತರ ಕರೆ ಮಾಡಿದರೂ ಸ್ವೀಕರಿಸಿಲ್ಲ:
ಭಾನುವಾರ ರಾತ್ರಿಯಿಂದ ಸೊರಬದಲ್ಲಿ ನೆಲೆಸಿರುವ ಮಕ್ಕಳು ತಾಯಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೂರ್ಣಿಮಾ ಅವರ ತಾಯಿ ಹೆಮ್ಮಾಡಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡಿ ಬರುವಂತೆ ತಿಳಿಸಿದ್ದರು. ಸಂಬಂಧಿಕರು ರಾತ್ರಿ ಹೋಗಿ ನೋಡಿದಾಗ ಲೈಟ್ ಆಫ್ ಇದ್ದ ಕಾರಣ ಮಲಗಿರಬಹುದು ಎಂದು ಅಂದಾಜಿಸಿ ವಾಪಾಸಾಗಿದ್ದರು. ಆದರೆ ಬೆಳಿಗ್ಗೆಯೂ ಕರೆ ಸ್ವೀಕರಿಸದ ಹಿನ್ನೆಲೆ ಮತ್ತೆ ಹೋಗಿ ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪೂರ್ಣಿಮಾ ರಕ್ತದ‌ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಹೆಂಚು ತೆಗೆದು ಒಳಗೆ ಹೋಗಿ ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಭಾನುವಾರ ತಾನು ಕೆಲಸ ಮಾಡುತ್ತಿದ್ದ ವಾಹನವನ್ನು ತೊಳೆದಿರಿಸಿ, ಮಾಲಿಕರಿಂದ ಹಣವನ್ನು ಪಡೆದುಕೊಂಡಿದ್ದ ರವಿ ಆಚಾರ್ ಸೋಮವಾರ ತಾನು ಕೆಲಸಕ್ಕೆ ಬರುವುದಿಲ್ಲ, ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದ್ದ ಎನ್ನುವ ಮಾಹಿತಿ ಇದೆ. ವಾಹನದ ಬ್ಲೇಡ್ ನಿಂದ ತಲೆಗೆ ಚಚ್ಚಿ ಕೊಲೆಗೈದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ್ದ ಬ್ಲೇಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಎಲ್ಲಾ ಅಂಶ ಹಾಗೂ ವಿಷದ ಬಾಟಲಿಯನ್ನು ಮೊದಲೇ ತಂದಿರಿಸಿಕೊಂಡಿದ್ದರಿಂದ ಇದು ಪೂರ್ವನಿಯೋಜಿತ ಕೃತ್ಯವಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ, ಸಿಪಿಐ ಗೋಪಿಕೃಷ್ಣ, ಠಾಣಾಧಿಕಾರಿ ಪವನ್ ನಾಯ್ಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.


Spread the love