ಪತ್ರಕರ್ತರಿಗೆ ಉಡುಗೊರೆ: ಕಾಂಗ್ರೆಸ್ ಗೆ ಮಾತನಾಡುವ ನೈತಿಕ ಹಕ್ಕಿಲ್ಲ – ಬಸವರಾಜ ಬೊಮ್ಮಾಯಿ

Spread the love

ಪತ್ರಕರ್ತರಿಗೆ ಉಡುಗೊರೆ: ಕಾಂಗ್ರೆಸ್ ಗೆ ಮಾತನಾಡುವ ನೈತಿಕ ಹಕ್ಕಿಲ್ಲ – ಬಸವರಾಜ ಬೊಮ್ಮಾಯಿ

ಪತ್ರಕರ್ತರಿಗೆ ಗಿಫ್ಟ್ ನೀಡಿರುವ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ಸಿನ ಟೂಲ್ ಕಿಟ್ ನ ಪರಿಣಾಮ. ಸುಳ್ಳನ್ನು ಸೃಷ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾನು ಯಾರಿಗೂ ಸೂಚನೆಯನ್ನು ನೀಡಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಕಾಂಗ್ರೆಸ್ ಇದ್ದಾಗ ಹಲವಾರು ಜನರಿಗೆ ಏನೇನು ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಐ ಫೋನ್, ಲ್ಯಾಪ್ಟಾಪ್, ಬಂಗಾರದ ನಾಣ್ಯಗಳನ್ನೇ ಕೊಟ್ಟಿದ್ದಾರೆ. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ. ಯಾರೋ ಒಬ್ಬರು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು, ತನಿಖೆಯಾಗುತ್ತದೆ. ಇದರ ಅರ್ಥ ಎಲ್ಲಾ ಪತ್ರಕರ್ತರು ಉಡುಗೊರೆಯನ್ನು ಪಡೆದಿದ್ದಾರೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಿನ್ನೆ ಕಾಂಗ್ರೆಸ್ ವಕ್ತಾರ ಬಹಳ ಕೆಟ್ಟದಾಗಿ ಅದನ್ನು ವ್ಯಾಖ್ಯಾನ ಮಾಡಿದ್ದು ಅದನ್ನು ನಾನು ಖಂಡಿಸುತ್ತೇನೆ. ಉಡುಗೊರೆ ನೀಡುವ ಬಗ್ಗೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಲೋಕಾಯುಕ್ತ ತನಿಖೆಯಾಗಲಿ ಎಂದರು.

ಇನ್ಸ್ಪೆಕ್ಟರ್ ನಂದೀಶ್ ಪ್ರಕರಣದ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿ ಎಲ್ಲಾ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದರು

ಬಿಜೆಪಿಗೆ ಒಬಿಸಿ ಬೆಂಬಲದ ದ್ಯೋತಕವಾಗಿ ಸಮಾವೇಶ ಒಬಿಸಿ ದೊಡ್ಡ ಪ್ರಮಾಣದ ಬೆಂಬಲ ಬಿಜೆಪಿಗೆ ದೊರೆಯುತ್ತಿರುವ ದ್ಯೋತಕವಾಗಿ ಈ ಕಲಬುರಗಿಯಲ್ಲಿ ಸಮಾವೇಶ ಆಯೋಜನೆಗೊಂಡಿದೆ ಎಂದರು.

ನವೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ಸಮಾವೇಶವಿದೆ. ನಂತರ ಪರಿಶಿಷ್ಟ ಜಾತಿಗಳ ಸಮಾವೇಶ ನಡೆಯಲಿದೆ. ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ನಡೆಯಲಿದ್ದು, ಡಿಸೆಂಬರ್ ತಿಂಗಳಲ್ಲಿ ಮಹಿಳೆಯರ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಪಕ್ಷದ ಅಧ್ಯಕ್ಷರು, ಕೋರ್ ಸಮಿತಿ ತೀರ್ಮಾನ ಮಾಡಿದೆ. ಆ ಪ್ರಕಾರ ಇಂದು ಕಲಬುರಾಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಸುಮಾರು 2 ಲಕ್ಷ ಜನ ಸೇರಲಿದ್ದು, ಒಬಿಸಿ ಮೋರ್ಚಾ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಸೇರುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


Spread the love