ಪದವಿ ಫಲಿತಾಂಶದಲ್ಲಿ ಲೋಪದೋಷಗಳನ್ನು ಸರಿಪಡಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Spread the love

ಪದವಿ ಫಲಿತಾಂಶದಲ್ಲಿ ಲೋಪದೋಷಗಳನ್ನು ಸರಿಪಡಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಕುಂದಾಪುರ: ಇತ್ತೀಚೆಗಷ್ಟೇ ಪ್ರಕಟಗೊಂಡಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಕಾಲೇಜು ಗಳ 5 ಮತ್ತು 3 ನೇ ಸೆಮಿಸ್ಟರ್ ನ ಫಲಿತಾಂಶದಲ್ಲಿ ಅನೇಕ ದೋಷಗಳಿದ್ದು, ಅದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಎಬಿವಿಪಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಶನಿವಾರ ಕುಂದಾಪುರದಲ್ಲಿ ನಗರದಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಮಿನಿ ವಿಧಾನಸೌಧದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಜಯಸೂರ್ಯ ಶೆಟ್ಟಿ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಲೋಪ ದೋಷಗಳಿಂದಾಗಿ ಉದ್ಯೋಗ ಮೇಳದಲ್ಲಿ ಲಭಿಸಿದ್ದ ಕೆಲಸವನ್ನು ಅನೇಕ ವಿದ್ಯಾರ್ಥಿಗಳು ಕಳೆದುಕೊಳ್ಳುವಂತಾಗಿದೆ. ಉದ್ಯೋಗ ನೀಡುವ ಕಂಪೆನಿಗಳು ಅಂಕಪಟ್ಟಿ ಇಲ್ಲ ಎನ್ನುವ ಕಾರಣಕ್ಕೆ ಉದ್ಯೋಗ ನೀಡಲು ನಿರಾಕರಣೆ ಮಾಡಲಾಗುತ್ತಿದೆ. ಎಲ್ಲಾ ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಒಂದು ವಿಷಯದಲ್ಲಿ ಕೇವಲ 8 ಅಂಕ ಲಭಿಸಿದೆ. ಇದೇ ರೀತಿ ಅನೇಕ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ಮಂಗಳೂರು ವಿಶ್ವ ವಿದ್ಯಾನಿಲಯವೇ ಇದಕ್ಕೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಆರೋಪಿಸಿದರು.

ಕಾಲೇಜು ಅಧ್ಯಯನ ವೇಳೆಯಲ್ಲಿ ಉತ್ತಮ ಅಂಕಗಳನ್ನು ದಾಖಿಸಿರುವ ಅನೇಕ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ರೀತಿ ಬಂದಿರುವ ಕಡಿಮೆ ಅಂಕವನ್ನು ಒಪ್ಪಲು ಸಿದ್ದವಿಲ್ಲ. ಈ ರೀತಿಯ ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿ ಸಂಘಟನೆ ನಿಲ್ಲುತ್ತದೆ ಹಾಗೂ ಈ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹೋರಾಟವನ್ನು ನಡೆಸುತ್ತೇವೆ ಎಂದು ಹೇಳಿದ ಅವರು ಈ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ವಿಶ್ವ ವಿದ್ಯಾಲಯ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.

ಬುಧವಾರ ಪ್ರಕಟಗೊಂಡ ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶದಲ್ಲಿ ಎಲ್ಲಾ ವಿಷಯದಲ್ಲಿ 108 ಕ್ಕಿಂತ ಹೆಚ್ಚು ಅಂಕ ಪಡೆದಿದ್ದೇನೆ. ಆದರೆ ಕಾಸ್ಟ್ ಅಕೌಂಟ್ ವಿಷಯದಲ್ಲಿ 8 ಅಂಕ ಬಂದಿದೆ. ವಿಷಯದಲ್ಲೂ 100 ಕ್ಕಿಂತ ಹೆಚ್ಚು ಅಂಕ ಪಡೆಯುತ್ತೇನೆ ಎನ್ನುವ ವಿಶ್ವಾಸ ಇದೆ. ಹಣ ಕಟ್ಟಿ ಪರೀಕ್ಷೆ ಬರೆದು ವಿಶ್ವವಿದ್ಯಾನಿಲಯದಿಂದ ಆಗಿರುವ ಲೋಪಕ್ಕೆ ನಾನು ಹೊಣೆ ಹೊರಲು ಸಾಧ್ಯವೇ ಇಲ್ಲ. ಒಂದು ವಾರದೊಳಗೆ ಈ ಫಲಿತಾಂಶಕ್ಕೆ ಸೂಕ್ತ ಕಾರಣ ನೀಡದೇ ಇದ್ದರೆ ವಿಶ್ವ ವಿದ್ಯಾನಿಲಯಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ರಂಜಿತಾ ಎಚ್ಚರಿಕೆ ನೀಡಿದರು

ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಕೆ.ರಾಜು ಅವರು, ಎಬಿವಿಪಿ ಕಾರ್ಯಕರ್ತರು ಪದವಿ ಪರೀಕ್ಷೆಯ ಫಲಿತಾಂಶದ ಗೊಂದಲ ಮತ್ತು ಅದರಿಂದ ಕ್ಯಾಂಪಸ್ ಸೆಲೆಕ್ಷನ್ ಗೆ ಸಮಸ್ಯೆಯಾಗಿದೆ ಎಂದು ಮನವಿ ನೀಡಿದ್ದಾರೆ. ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇನೆ. ಅವರು ತುರ್ತು ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾಲೇಜಿನಿಂದ (ಕ್ಯಾಂಪಸ್ ಆಯ್ಕೆ) ವಿವಿಧ ಕಂಪನಿಗಳಿಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾನಿಲಯದಿಂದಲೆ ಅಂಕಪಟ್ಟಿ ವಿಳಂಭವಾಗಿರುವುದರಿಂದ, ಸಮಯಾವಕಾಶವನ್ನು ಒದಗಿಸಬೇಕೆಂದು ತಿಳಿಸುವುದಾಗಿ ಹೇಳಿದರು.

ಎಬಿವಿಪಿ ಪ್ರಮುಖರಾದ ವಿತೇಶ್ ಶೆಟ್ಟಿ, ರಾಹುಲ್, ನಿಶಾನ್, ರಂಜಿತ್, ವೀಕ್ಷಿತ್, ವಿಘ್ನೇಶ್, ವೈಷ್ಣವಿ, ದರ್ಶನ್, ದೀಪಾ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.


Spread the love

Leave a Reply

Please enter your comment!
Please enter your name here