
ಪರಶುರಾಮನ ಮೂರ್ತಿಗೆ ಫೈಬರ್ ಬಳಕೆ ಆರೋಪ – ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಲು ಆಗ್ರಹ
ಉಡುಪಿ: ಕಾರ್ಕಳ ತಾಲ್ಲೂಕು ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಪರಶುರಾಮನ ಮೂರ್ತಿಯ ನೈಜತೆಯ ಬಗ್ಗೆ ಅನುಮಾನಗಳಿದ್ದು ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಒತ್ತಾಯಿಸಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ ಪರಶುರಾಮ ಮೂರ್ತಿ ಕಂಚಿನದ್ದಲ್ಲ; ನಕಲಿ ಮೂರ್ತಿ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಜಿಲ್ಲಾಡಳಿತ ಕೂಡಲೇ ಆರೋಪಗಳ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪರಶುರಾಮ ಥೀಂಪಾರ್ಕ್‌ನ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಮೊದಲು ಪರಶುರಾಮನ ಮೂರ್ತಿಯ ನೈಜತೆಯ ಬಗ್ಗೆ ಬಹಿರಂಗವಾಗಬೇಕು. ಪರಶುರಾಮನ ಮೂರ್ತಿ ಭಾವನಾತ್ಮಕ ವಿಚಾರವಾಗಿದ್ದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದರು.
ಪರಶುರಾಮನ ಮೂರ್ತಿಯ ಮೊಣಕಾಲಿನವರೆಗೂ ಕಂಚು ಬಳಸಲಾಗಿದ್ದು ಉಳಿದ ಭಾಗಕ್ಕೆ ಕಂಚು ಬಳಸಿಲ್ಲ. ಬಿಲ್ಲು ಹಿಡಿದಿರುವುದು, ಕೊಡಲಿ ಇಡಿದಿರುವ ಕ್ರಮವೂ ಸರಿಯಿಲ್ಲ ಎಂಬ ದೂರುಗಳಿವೆ. ₹ 14 ಕೋಟಿ ವೆಚ್ಚದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಿಸಲಾಗಿದ್ದು ಜನರ ಭಾವನೆಗಳೊಂದಿಗೆ ಆಟವಾಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಅಧೀನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಗ್ರಾಮ ಪಂಚಾಯಿತಿ ಅಧಿಕಾರಿಗಳು ಗೋಮಾಳದಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಾಣಕ್ಕೆ ಅನುಮತಿ ಇರುವುದಿಲ್ಲ ಎಂದು ವರದಿ ನೀಡಿದ್ದರೂ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಶುಭದರಾವ್ ಮಾತನಾಡಿ, ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಕಾರ್ಕಳ ತಾಲ್ಲೂಕಿನಲ್ಲಿ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದೀಗ ಪರಶುರಾಮನ ಮೂರ್ತಿಯ ನೈಜತೆಯ ಬಗ್ಗೆ ಸಂಶಯ ಮೂಡಿದ್ದು ಸತ್ಯಾಸತ್ಯಾತೆ ಬಯಲಾಗುತ್ತಿದೆ ಎಂದು ಆರೋಪಿಸಿದರು.
ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಕಂಚಿನ ಜತೆಗೆ ಫೈಬರ್ ಬಳಸಲಾಗಿದೆ ಎಂಬ ಆರೋಪಗಳಿದ್ದು ತನಿಖೆ ನಡೆಸುವಂತೆ ಹಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನವಹಿಸಿದ್ದಾರೆ. ಪ್ರತಿಭಟನಾಕಾರರ ಅಹವಾಲು ಆಲಿಸುವ ಬದ್ಧತೆಯನ್ನೂ ತೋರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಮಗಾರಿಯ ಬಗ್ಗೆ ಸಂಶಯ ಬಂದಾಗ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಜನತೆಯ ಮುಂದೆ ಬಹಿರಂಗಪಡಿಸಬೇಕು. ಆದರೆ, ಜಿಲ್ಲಾಡಳಿತ ಇದುವರೆಗೂ ಪರಶುರಾಮ ಥೀಂ ಪಾರ್ಕ್‌ಗೆ ಭೇಟಿನೀಡಿ ಪರಿಶೀಲನೆ ಮಾಡಿಲ್ಲ. ಮೂರ್ತಿಯ ಬಗ್ಗೆ ಇರುವ ಸಂಶಯ ಗೊಂದಲ ಪರಿಹರಿಸಿಲ್ಲ. ಕೂಡಲೇ ಪರಶುರಾಮ ಮೂರ್ತಿಯ ನೈಜತೆ ಬಯಲು ಮಾಡಬೇಕು ಎಂದು ಒತ್ತಾಯಿಸಿದರು.
ಕಾಮಗಾರಿ ಮುಗಿದಿಲ್ಲ: ಸ್ಪಷ್ಟನೆ
ಪರಶುರಾಮ ಥೀಂ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿಲ್ಲ. 2021-22ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ. ಕಾಮಗಾರಿಗೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗದಿದ್ದರೂ ಬಾಕಿ ಕಾಮಗಾರಿಗಳನ್ನು ಉಳಿಸಿಕೊಂಡು ಪರುಶುರಾಮ ಥೀಂ ಪಾರ್ಕ್ ಉದ್ಘಾಟನೆ ಮಾಡಲಾಗಿದೆ. ಇದೀಗ ಪರಶುರಾಮ ಮೂರ್ತಿ ಹಾಗೂ ಇತರ ಸಿವಿಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಅನುದಾನ ಕೊರತೆಯಿಂದ ಮಂದಗತಿಯಲ್ಲಿ ಸಾಗುತ್ತಿದೆ. ವಾಸ್ತವಾಂಶ ತಿಳಿಯದೆ ಅಪಪ್ರಚಾರ ಮಾಡಬಾರದು ಗೊಂದಲ ಸೃಷ್ಟಿಸಬಾರದು ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.