ಪರಿಪೂರ್ಣ ಕಾಮಗಾರಿಗಾಗಿ ಇನ್ನೂ ಒಂದು ಲಕ್ಷ ರೂ. ಕೊಡುವೆ: ಹೆಮ್ಮಾಡಿ ರಿಕ್ಷಾ ನಿಲ್ದಾಣ ಉದ್ಘಾಟಿಸಿ ಶಾಸಕ ಬಿಎಮ್‍ಎಸ್

Spread the love

ಪರಿಪೂರ್ಣ ಕಾಮಗಾರಿಗಾಗಿ ಇನ್ನೂ ಒಂದು ಲಕ್ಷ ರೂ. ಕೊಡುವೆ: ಹೆಮ್ಮಾಡಿ ರಿಕ್ಷಾ ನಿಲ್ದಾಣ ಉದ್ಘಾಟಿಸಿ ಶಾಸಕ ಬಿಎಮ್‍ಎಸ್

ಕುಂದಾಪುರ: ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಮೂರು ಲಕ್ಷ ರೂ. ವೆಚ್ಚದಲ್ಲಿ ನಡೆದ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಹೆಮ್ಮಾಡಿಯಲ್ಲಿ ಸುಸಜ್ಜಿತವಾದ ರಿಕ್ಷಾ ನಿಲ್ದಾಣ ತಲೆ ಎತ್ತಿ ನಿಂತಿದೆ. ನೆಲಕ್ಕೆ ಇಂಟರ್‍ಲಾಕ್ ಅಳವಡಿಸಿದರೆ ರಿಕ್ಷಾ ನಿಲ್ದಾಣ ಇನ್ನಷ್ಟು ಅಂದವಾಗಿ ಕಾಣುತ್ತದೆ. ಹೀಗಾಗಿ ಇನ್ನೂ ಒಂದು ಲಕ್ಷ ರೂ. ಹೆಚ್ಚಿನ ಅನುದಾನವನ್ನು ನಿಲ್ದಾಣದ ಪರಿಪೂರ್ಣ ಕಾಮಗಾರಿಗಾಗಿ ಕೊಡುತ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಬುಧವಾರ ಮೂರು ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.

ಕೊಲ್ಲೂರು ರಸ್ತೆಯಿಂದ ಹೆಮ್ಮಾಡಿಗೆ ಆಗಮಿಸಿದರೆ ಮೊದಲು ಕಣ್ಣಿಗೆ ಬೀಳುವುದೇ ಹೆಮ್ಮಾಡಿ ರಿಕ್ಷಾ ನಿಲ್ದಾಣ. ಇಲ್ಲಿನ ರಿಕ್ಷಾ ಚಾಲಕರು ಸೂಕ್ತ ನೆಲೆ ಇಲ್ಲದೇ ಬಿಸಿಲು ಮಳೆಯನ್ನು ಲೆಕ್ಕಿಸದೆ ದುಡಿಯುತ್ತಿರುವುದು ಗಮನಕ್ಕೆ ಬಂದಿದೆ. ಚಾಲಕರ ಬೇಡಿಕೆಯಂತೆ ನಿಲ್ದಾಣಕ್ಕೆ ಅನುದಾನ ಬಿಡುಗಡೆಮಾಡಿದ್ದೇನೆ ಎಂದರು.

ಸಂತೋಷನಗರಿಂದ ಬುಗ್ರಿಕಡುವಿನ ತನಕ ಮುಂದುವರಿದ ರಸ್ತೆ ಕಾಮಗಾರಿಗಾಗಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ. ಶಾಸಕನಾಗುವ ಮೊದಲು ಹೆಮ್ಮಾಡಿ ದೇವಸ್ಥಾನದ ಅಭಿವೃದ್ದಿಗಾಗಿ ಸಹಾಯ ಮಾಡುತ್ತೇನೆ ಎಂದಿದ್ದೆ. ದೇವಸ್ಥಾನದ ಅಭಿವೃದ್ದಿಗಾಗಿ ಈಗಾಗಲೇ ಹತ್ತು ಲಕ್ಷ ರೂ. ಮೀಸಲಿಟ್ಟಿದ್ದೇನೆ. ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದ ಅಭಿವೃದ್ದಿಗೆ ಯಾರೂ ಮುಂದೆ ಬಂದಿಲ್ಲವೆಂಬ ನೋವಿದೆ ಎಂದ ಅವರು, ಇನ್ನಾದರೂ ದೇವಸ್ಥಾನದ ಅಭಿವೃದ್ದಿಗೆ ಇಲ್ಲಿನ ಜನರು ಮುಂದಾದರೆ ಇನ್ನೂ ಹೆಚ್ಚಿನ ಅನುದಾನವನ್ನು ಕೊಡುವ ಭರಸವೆ ನೀಡಿದರು.

ಅನುದಾನ ಬಿಡುಗಡೆಗೊಳಿಸಿ ಸುಸಜ್ಜಿತ ನಿಲ್ದಾಣಕ್ಕೆ ಸಹಕರಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿಯವರನ್ನು ರಿಕ್ಷಾ ಚಾಲಕರು ಸನ್ಮಾನಿಸಿದರು. ಇದೇ ವೇಳೆ ರಾ.ಹೆದ್ದಾರಿಯಲ್ಲಿ ವಾಹನಗಳ ವೇಗ ತಡೆಗಾಗಿ ಹೋಟೆಲ್ ಜ್ಯುವೆಲ್ ಪಾರ್ಕ್‍ನ ಮಾಲೀಕರಾದ ಜಗದೀಶ್ ಶೆಟ್ಟಿ ಅವರು ಎರಡು ಬ್ಯಾರಿಕೇಡ್‍ಗಳನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯೆ ಶೋಭಾ ಜಿ ಪುತ್ರನ್. ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಹೆಮ್ಮಾಡಿ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮೊಗವೀರ, ಸತ್ಯನಾರಾಯಣ ಉಡುಪ, ಉದ್ಯಮಿಗಳಾದ ಜಗದೀಶ್ ಶೆಟ್ಟಿ, ಹರೀಶ್ ಭಂಡಾರಿ, ನಾಗರಾಜ್ ಗಾಣಿಗ, ಕಾಮಗಾರಿಯ ಮುಂದಾಳತ್ವ ವಹಿಸಿದ್ದ ರಾಜೇಶ್ ದೇವಾಡಿಗ ಮೇಲ್ಮನೆ, ರವಿ ಕೆ ಹೆಮ್ಮಾಡಿ ಉಪಸ್ಥಿತರಿದ್ದರು.


Spread the love