ಪರಿಸರ ದಿನಾಚರಣೆಗೆ ಅರ್ಥ ಬರುವುದು ಯಾವಾಗ ಗೊತ್ತಾ?

Spread the love

ಪರಿಸರ ದಿನಾಚರಣೆಗೆ ಅರ್ಥ ಬರುವುದು ಯಾವಾಗ ಗೊತ್ತಾ?

ಅದ್ಯಾಕೋ ಗೊತ್ತಿಲ್ಲ ಮೊದಲಿನಂತೆ ನಾವು ನಿರೀಕ್ಷೆ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ. ಎಲ್ಲೋ ಒಂದು ಕಡೆ ಸದ್ದಿಲ್ಲದಂತೆ ನಿಸರ್ಗದಲ್ಲಿ ಬದಲಾವಣೆ, ವಾತಾವರಣದಲ್ಲಿ ಏರುಪೇರಾಗುತ್ತಿದೆ.

ಹಿರಿಯರನ್ನು ಮಾತನಾಡಿಸಿದರೆ ಅಯ್ಯೋ ಮೊದಲು ಹೀಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಮೈಮರಗಟ್ಟುವ ಚಳಿಯಿದ್ದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.. ಎಲ್ಲವೂ ಕಾಲಕ್ಕೆ ತಕ್ಕಂತೆ ಸರಿಯಾಗಿ ನಡೆಯುತ್ತಿತ್ತು. ಈಗ ಎಲ್ಲ ಹಾಳಾಗಿದೆ ಎಂದು ತಮ್ಮ ಗತವೈಭವವನ್ನು ತೆರೆದಿಡುತ್ತಾ ಇವತ್ತಿನ ದುಸ್ಥಿತಿಗೆ ಹಿಡಿಶಾಪ ಹಾಕುತ್ತಾರೆ.

ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ.

ಒಂದು ಉತ್ತಮ ರಸ್ತೆ ಬೇಕೆಂದರೆ ಬೆಟ್ಟಗುಡ್ಡ ಅಗೆಯಬೇಕು, ಮರಗಳನ್ನು ಕಡಿಯಬೇಕು. ಅದಷ್ಟನ್ನು ಮಾಡಿಲ್ಲ ಅಂದರೆ ರಸ್ತೆ ನಿರ್ಮಾಣ ಆಗಲ್ಲ. ರಸ್ತೆಯೇ ಇಲ್ಲ ಅಂದ ಮೇಲೆ ಅಭಿವೃದ್ದಿ ಎನ್ನಲಾಗುವುದಿಲ್ಲ. ನಾವು ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗಲೆಲ್ಲ. ಅದರ ಉಪಯೋಗವನ್ನು ಮನುಷ್ಯ ಅನುಭವಿಸಿದರೂ ಕೂಡ ದುಷ್ಪರಿಣಾಮ ಮಾತ್ರ ಪ್ರಕೃತಿ ಮೇಲೆಯೇ ಎಂಬುವುದರಲ್ಲಿ ಎರಡು ಮಾತಿಲ್ಲ.

ಇವತ್ತು ನಮಗೆಲ್ಲರಿಗೂ ಹಣದ ವ್ಯಾಮೋಹ.. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ.

ಯಾವಾಗ ಜನ ಲೆಕ್ಕಾಚಾರದ ಬದುಕಿಗೆ ಮಾರು ಹೋದರೋ ಅದರ ಜತೆಗೆ ಕಷ್ಟ ನಷ್ಟಗಳನ್ನು ಹೊತ್ತೊಯ್ಯುತ್ತಿರುವುದು ಸಾರ್ವತ್ರಿಕ ಸತ್ಯ.

ಒಂದೆರಡು ದಶಕಗಳ ಹಿಂದೆ ಮಲೆನಾಡಿಗೆ ಬಂದವರು ಈಗ ಮತ್ತೊಮ್ಮೆ ಬಂದರೆ ಇಲ್ಲಿನ ಬದಲಾವಣೆಗಳು ಎದ್ದು ಕಾಣುತ್ತದೆ. ಮೊದಲಿನಂತೆ ಅಲ್ಲಿ ಯಾವುದೂ ಇಲ್ಲದಾಗಿದೆ. ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ.

ಸುಡು ಬೇಸಿಗೆಯಲ್ಲೂ ತಣ್ಣಗಿದ್ದ ಮಲೆನಾಡು ಇವತ್ತು ಬೇಸಿಗೆ ಬಂತೆಂದರೆ ಸುಡುತ್ತದೆ. ಮಳೆಗಾಲ ಬಂತೆಂದರೆ ಭೂಕುಸಿತ, ಪ್ರವಾಹ ಸೇರಿದಂತೆ ಒಂದಲ್ಲ ಒಂದು ರೀತಿಯ ಪ್ರಕೃತಿ ವಿಕೋಪಗಳಿಗೆ ತೆರೆದುಕೊಳ್ಳುತ್ತದೆ. ಇದು ಕಳೆದ ಒಂದೆರಡು ಎರಡು ದಶಕಗಳಲ್ಲಿ ಪರಿಸರದ ಮೇಲೆ ಮಾನವ ನಡೆಸಿದ ಅತ್ಯಾಚಾರದ ಫಲ ಎಂದರೆ ತಪ್ಪಾಗಲಾರದು.

ನಾವೆಷ್ಟು ಲೆಕ್ಕಚಾರದ ಸ್ವಾರ್ಥಿಗಳಾಗುತ್ತಿದ್ದೇವೆ ಎಂದರೆ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್‌ಓಕ್, ತೇಗದ ಮರಗಳನ್ನು ನೆಡುತ್ತಿದ್ದೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ. ಇದರ ಪರಿಣಾಮವೇ ಇವತ್ತು ವನ್ಯಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತಾಗಿದೆ.

ಪ್ರತಿವರ್ಷ ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಲೇ ಇದ್ದೇವೆ. ಅದು ಕೆಲವರಿಗೆ ಪ್ರಚಾರ ಪಡೆಯುವುದಕ್ಕಷ್ಟೆ ಸೀಮಿತವಾಗಿ ಹೋಗಿದೆ. ದುರಂತ ಏನೆಂದರೆ ಕಳೆದ ವರ್ಷ ನೆಟ್ಟ ಸ್ಥಳದಲ್ಲೇ ಈ ವರ್ಷವೂ ಗಿಡ ನೆಡುತ್ತೇವೆ. ಆದರೆ ನಾವ್ಯಾರೂ ಕಳೆದ ವರ್ಷ ನೆಟ್ಟ ಗಿಡ ಏನಾಯಿತು ಎಂದು ಯೋಚಿಸುವುದೇ ಇಲ್ಲ. ಜತೆಗೆ ನೆಟ್ಟ ಗಿಡವನ್ನು ಬೇಸಿಗೆಯಲ್ಲಿ ನೀರು ಹಾಕಿ ಸಲಹುವ ಗೋಜಿಗೆ ಹೋಗುವುದಿಲ್ಲ. ಇನ್ನು ಮುಂದೆಯಾದರೂ ನೆಟ್ಟ ಗಿಡವನ್ನು ಸಂರಕ್ಷಿಸಿ ಬೆಳೆಸುವ ಕಾರ್ಯವಾಗಲಿ ಆಗ ಪರಿಸರ ದಿನಾಚರಣೆ ಅರ್ಥ ಬರಬಹುದೇನೋ?


Spread the love