ಪರೇಶ ಮೇಸ್ತ ಸಾವಿನ ನೈಜತೆ ತಿಳಿಸಲು ನ 24ಕ್ಕೆ ಕುಮಟಾದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ: ಐವನ್ ಡಿ’ಸೋಜಾ

Spread the love

ಪರೇಶ ಮೇಸ್ತ ಸಾವಿನ ನೈಜತೆ ತಿಳಿಸಲು ನ 24ಕ್ಕೆ ಕುಮಟಾದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ: ಐವನ್ ಡಿ’ಸೋಜಾ

ಉಡುಪಿ: ಪರೇಶ್ ಮೇಸ್ತಾನ ಸಾವಿನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡಿದ ಬಿಜೆಪಿಗರ ನೈಜ ಬಣ್ಣವನ್ನು ಬಯಲು ಮಾಡುವ ಉದ್ದೇಶದಿಂದ ನವೆಂಬರ್ 24ರಂದು ಕುಮಟಾದಲ್ಲಿ ರಾಜ್ಯ ಮಟ್ಟದ ಬೃಹತ್ ಜನಸಂಪರ್ಕ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದರು.

ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಅಧಿಕಾರದ ಸೂತ್ರ ಹಿಡಿಯಿತು. ಪರೇಶ ಮೇಸ್ತ ಸಾವಿನ ನಂತರ ಜಿಲ್ಲಾದ್ಯಂತ 67 ವಿವಿಧ ಕಲಂ ಅಡಿಯಲ್ಲಿ2988 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. 361 ಜನರ ಬಂಧನವಾಯಿತು. 272 ಜನರ ಮೇಲೆ ರೌಡಿಶೀಟರ್‌ ಪ್ರಕರಣ ದಾಖಲಾಗಿದ್ದವು. 1699 ಜನರ ವಿರುದ್ಧ ಪೊಲೀಸರು ಕೋರ್ಟಿನಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಬಿಜೆಪಿಯ ಸುಳ್ಳಿನ ಪ್ರಚಾರದಿಂದ ಅನೇಕ ಯುವಕರ ಕುಟುಂಬಗಳು ಬೀದಿ ಪಾಲಾಗಿವೆ. ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿದ ಬಿಜೆಪಿ ಸಹಜ ಸಾವನ್ನು ಅನ್ಯಕೋಮಿನವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿತು. ಇದು ರಾಜ್ಯಾದ್ಯಂತ ಕೋಮು ಸಂಘರ್ಷಕ್ಕೆ ಕಾರಣವೂ ಆಯಿತು. ಸುಳ್ಳಿನ ಮೂಟೆ ಕಟ್ಟಿದ ಬಿಜೆಪಿ ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ನೋಡಿಕೊಂಡಿತ್ತು. ಹೀಗಾಗಿ ಬಿಜೆಪಿ ಶಾಸಕರು ಪರೇಶ ಮೇಸ್ತ ಸಾವಿನ ಫಲಾನುಭವಿಗಳು. ಆದ ಕಾರಣ ಅವರು ತಕ್ಷಣ ರಾಜೀನಾಮೆ ನೀಡಬೇಕಿತ್ತು ಎಂದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದಾಗ, ಸಿಬಿಐಗೆ ಒಪ್ಪಿಸುವಂತೆ ಬಿಜೆಪಿ ಪ್ರತಿಭಟಿಸಿತ್ತು. ಹೀಗಾಗಿ ಸಿದ್ದರಾಮಯ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಸುದೀರ್ಘ 5 ವರ್ಷ ತನಿಖೆ ನಡೆಸಿದ ಸಿಬಿಐ ಪರೇಶ ಮೇಸ್ತನ ಸಾವು ಸಹಜ, ಕೊಲೆ ಅಲ್ಲಎಂದು ಕೋರ್ಟಿಗೆ ಬಿ ರಿಪೋರ್ಟ್‌ ನೀಡಿದೆ. ಇದರಿಂದ ಬಿಜೆಪಿಯ ಸುಳ್ಳಿನ ಮುಖವಾಡ ಕಳಚಿ ಬಿದ್ದಿದೆ ಎಂದರು.

ಪರೇಶ ಮೇಸ್ತ ಸಾವಿನ ನೈಧಿಜತೆ ಹಾಗೂ ಬಿಜೆಪಿಯ ನೈಜ ಬಣ್ಣ ಜನರ ಎದುರು ತೆರೆದಿಡಲು ಸಮಾನತೆ ಮತ್ತು ಸೌಹಾರ್ದತೆ ಎಂಬ ಧ್ಯೇಯ ವಾಕ್ಯದೊಂದಿಗೆ ಕುಮಟಾದಲ್ಲಿ ಬೃಹತ್‌ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ.

ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವರು, ಹಾಲಿ ಶಾಸಕರು ಸೇರಿದಂತೆ ಸುಮಾರು ರಾಜ್ಯದ ಹಲವು ಮುಖಂಡರು ಪಾಲ್ಗೊಳ್ಳುವರು. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಸುಮಾರು 50 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರ ಭಾಸ್ಕರ್ ರಾವ್, ನಾಯಕರಾದ ಕೀರ್ತಿ ಶೆಟ್ಟಿ, ಕುಶಲ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here