ಪಾಂಡವಪುರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

Spread the love

ಪಾಂಡವಪುರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ಪಾಂಡವಪುರ: ತಾಲೂಕಿನಾದ್ಯಂತ ಗುಂಡಿಬಿದ್ದು ಹದಗೆಟ್ಟ ರಸ್ತೆಗಳಿಂದಾಗಿ ಪ್ರತಿನಿತ್ಯ ಅಪಘಾತಗಳಾಗಿ ಜನ ಸಾವನ್ನಪ್ಪುತ್ತಿದ್ದರೂ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಮಾತ್ರ ಹೆದ್ದಾರಿಯಲ್ಲಿ ಅಕ್ರಮವಾಗಿ ಗಣಪತಿ ದೇವಾಲಯ ಕಟ್ಟಿಸುವಲ್ಲಿ ಮಗ್ನರಾಗಿದ್ದಾರೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಶಾಸಕ ಪುಟ್ಟರಾಜು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರ ರೈಲ್ವೆ ನಿಲ್ದಾಣದ ಮೇಲ್ಸೇತುವೆ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ರಸ್ತೆಯಲ್ಲಿ ಹದಗೆಟ್ಟ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘ ಕರೆ ನೀಡಿದ್ದ ರಸ್ತೆತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ರಸ್ತೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಹಣ ಬಿಡುಗಡೆಯಾಗಿದ್ದರೂ ಗುತ್ತಿಗೆದಾರ ಕಾಮಗಾರಿ ಆರಂಭಿಸಿಲ್ಲ. ಹೀಗಾಗಿ ಗುಂಡಿಬಿದ್ದ ಹಲವಾರು ರಸ್ತೆಗಳಲ್ಲಿ ನಿತ್ಯವೂ ಹಲವಾರು ಅಪಘಾತಗಳಾಗಿ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಆದರೆ ಕ್ಷೇತ್ರದ ಬೇಜವಾಬ್ದಾರಿ ಶಾಸಕ ಸಿ.ಎಸ್.ಪುಟ್ಟರಾಜು ರಸ್ತೆ ಗುಂಡಿ ಮುಚ್ಚಿಸುವ ಬದಲಿಗೆ ಅಧಿಕಾರಿಗಳನ್ನು ಹೆದರಿಸಿ ಹೆದ್ದಾರಿಯಲ್ಲಿ ಅಕ್ರಮವಾಗಿ ಗಣಪತಿ ದೇವಾಲಯ ಕಟ್ಟಿಸುತ್ತಿದ್ದಾರೆ. ಜಕ್ಕನಹಳ್ಳಿ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ದೇವಾಲಯ ನಿರ್ಮಾಣವಾದರೆ ಜನ ಸಂಚಾರ ಹೆಚ್ಚಾಗಿ ದೇವಾಲಯಕ್ಕೆ ಬರುವ ಮಹಿಳೆಯರು ಮತ್ತು ಮಕ್ಕಳು ಅಪಘಾತಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ. ರಸ್ತೆ ಮಧ್ಯೆ ದೇವಾಲಯ ನಿರ್ಮಾಣವಾಗುತ್ತಿರುವ ಕಾರಣ ಎದುರಿನಿಂದ ವಾಹನಗಳು ಬರುವುದು ಗೊತ್ತಾಗುವುದಿಲ್ಲ. ಇವು ಶಾಸಕರಿಗೆ ಅರ್ಥವಾಗುವುದಿಲ್ಲವೇ? ಜನರ ಪ್ರಾಣದ ನಡುವೆ ಚೆಲ್ಲಾಟವಾಡುವುದನ್ನು ಬಿಟ್ಟು ಜವಾಬ್ದಾರಿಯಿಂದ ತಾಲೂಕಿನ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಎಲೆಕೆರೆ ಮತ್ತು ಜಕ್ಕನಹಳ್ಳಿ ಬಸ್‍ನಿಲ್ದಾಣ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಹಿಂದಿನ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ಇದು ತಮ್ಮ ಅನುದಾನ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಶಾಸಕರ ಸಂಬಂಧಿಕರ ಪೆಟ್ರೋಲ್‍ಬಂಕ್ ಬಳಿ ಉತ್ತಮ ರಸ್ತೆ ನಿರ್ಮಿಸಿದ್ದು, ಬೇರೆ ಪೆಟ್ರೋಲ್ ಬಂಕ್ ಬಳಿಯ ರಸ್ತೆಗಳನ್ನು ಅಭಿವೃದ್ಧಿ ಮಾಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ರಸ್ತೆಗಳಿಗೆ ಡಕ್ ಹಾಕಿದ್ದು ಇನ್ನೂ ಡಾಂಬರೀಕರಣ ಮಾಡಿಲ್ಲ. ಗುತ್ತಿಗೆದಾರ ಕಾಮಗಾರಿ ನಿರ್ವಹಿಸಲು ವಿಳಂಬ ಮಾಡಿದರೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. 3 ವರ್ಷ ಹಳೆಯದಾದ ಡಕ್ ಈಗ ಕುಸಿಯುವ ಸಂಭವವಿದೆ. ಗುಂಡಿಬಿದ್ದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ದಿನನಿತ್ಯ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇμÁ್ಟದರೂ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಇ ಎಂ.ಬಿ.ರಾಜು ಧಾವಿಸಿ ಸೂಕ್ತ ಭರವಸೆ ನೀಡದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಬಿಗಿಪಟ್ಡು ಹಿಡಿದ ಕಾರಣ ಸುಮಾರು ಒಂದೂವರೆ ಗಂಟೆಕಾಲ ಹೆದ್ದಾರಿ ತಡೆ ನಡೆಯಿತು. ನೂರಾರು ವಾಹನಗಳು ಕಿಲೋ ಮೀಟರ್‍ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಈ ನಡುವೆ ಆಂಬುಲೆನ್ಸ್ ಮತ್ತು ಎತ್ತಿನಗಾಡಿ ತಿರುಗಾಡಲು ರೈತಮುಖಂಡರು ಅವಕಾಶ ನೀಡಿ ಮಾನವೀಯತೆ ಮೆರೆದರು.


Spread the love