
ಪಾನ್ ಕಾರ್ಡ್ ಲಿಂಕ್ ಮಾಡಲು ರೂ 1000 ದಂಡ: ಲೂಟಿ ಕೋರ ಬಿಜೆಪಿಗೆ ಧಿಕ್ಕಾರ – ರಮೇಶ್ ಕಾಂಚನ್
ಉಡುಪಿ: ಪಾನ್ ಕಾರ್ಡನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಲು ಮಾರ್ಚ್ 31 ವರೆಗೆ ರೂ. 1,000 ಬಳಿಕ ರೂ. 10,000 ದಂಡವನ್ನು ಬಡಜನರಿಂದ ಲೂಟಿ ಮಾಡುತ್ತಿರುವ ಕೇಂದ್ರ ಸರಕಾರದ ಜನವಿರೋಧಿ ನೀತಿಗೆ ನನ್ನ ಧಿಕ್ಕಾರವಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾನ್ ಕಾರ್ಡನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ನಿರ್ಧಿರಿಸಿರುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ದಂಡದ ರೂಪದಲ್ಲಿ ದುಬಾರಿ ಹಣವನ್ನು ಜನಸಾಮಾನ್ಯರಿಂದ ದೋಚಿ ಅದರಿಂದ ಲಾಭ ಮಾಡಿಕೊಳ್ಳಲು ಹೊರಟಿರುವ ಕೇಂದ್ರ ಸರಕಾರ ಬಡವರ ಹಾಗೂ ಮಧ್ಯಮ ವರ್ಗದ ಜನರನ್ನು ಯಾವ ರೀತಿ ಲೂಟಿ ಮಾಡುತ್ತಿದೆ ಎನ್ನುವುದಕ್ಕೆ ಇದು ಉತ್ತಮ ಸಾಕ್ಷಿಯಾಗಿದೆ.
ಜನರಿಗೆ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಸೂಚಿಸುವುದನ್ನು ಬಿಟ್ಟು ದುಬಾರಿ ದಂಡವನ್ನು ವಸೂಲಿ ಮಾಡಿ ಈ ಮೂಲಕ ಮುಂದಿನ ಚುನಾವಣೆಗೆ ಹಣ ಸಂಗ್ರಹಿಸಲು ಒಂದು ದಾರಿ ಮಾಡಿಕೊಟ್ಟಂತಿದೆ ಎಂದು ಜನಸಾಮಾನ್ಯರು ಮಾತನಾಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಜಿ.ಎಸ್.ಟಿ ಹೆಸರಿನಲ್ಲಿ ಲೂಟಿ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಂಡಿರುವ ಬಿಜೆಪಿ ಸರಕಾರ ಮತ್ತೆ ಪಾನ್ ಕಾರ್ಡ್ ಹೆಸರಿನಲ್ಲಿ ಲೂಟಲು ಹೊರಟಿದೆ. ತೆರಿಗೆ, ಬೆಲೆಏರಿಕೆ ಎಂದು ದಿನನಿತ್ಯ ಕಷ್ಟ ಅನುಭವಿಸುತ್ತಿರುವ ದೇಶದ ಜನರು ಮತ್ತೆ ಪಾನ್ ಕಾರ್ಡ್ ಮೂಲಕ ದಂಡ ಕಟ್ಟಬೇಕಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಮ್ಮ ಸಂಸದರು ಇಂತಹ ವಿಚಾರಗಳು ಬಂದಾಗ ಮೌನಕ್ಕೆ ಶರಣಾಗುವುದನ್ನು ಬಿಟ್ಟು ಜನರ ಪರ ನಿಲ್ಲಬೇಕು. ಆಗ ಮಾತ್ರ ನಾವು ಜನಪರ ಎಂದು ಹೇಳಲು ಸಾಧ್ಯವಿದೆ. ಇಂತಹ ಹಲವಾರು ಜನವಿರೋಧಿ ನೀತಿಗಳನ್ನು ಬಿಜೆಪಿ ಸರ್ಕಾರವು ಅನುಷ್ಠಾನಕ್ಕೆ ತಂದಾಗ ಜನರು ಈ ಬಿಜೆಪಿ ಸರ್ಕಾರದ ವಿರುದ್ಧ ರೊಚ್ಚಿಗೇಳುವ ದಿನ ದೂರವಿಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.