Home Mangalorean News Kannada News ಪಾಳುಬಿದ್ದಿರುವ ಕಲ್ಲುಕೋರೆಗಳಿಗೆ ತಡೆಬೇಲಿ: ಜಿ.ಪಂ. ಅಧ್ಯಕ್ಷರ ಸೂಚನೆ

ಪಾಳುಬಿದ್ದಿರುವ ಕಲ್ಲುಕೋರೆಗಳಿಗೆ ತಡೆಬೇಲಿ: ಜಿ.ಪಂ. ಅಧ್ಯಕ್ಷರ ಸೂಚನೆ

Spread the love

ಪಾಳುಬಿದ್ದಿರುವ ಕಲ್ಲುಕೋರೆಗಳಿಗೆ ತಡೆಬೇಲಿ: ಜಿ.ಪಂ. ಅಧ್ಯಕ್ಷರ ಸೂಚನೆ
ಮ0ಗಳೂರು: ಜಿಲ್ಲೆಯಲ್ಲಿ ಪಾಳು ಬಿದ್ದಿರುವ ಕಲ್ಲುಕೋರೆಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು, ಕೂಡಲೇ ಇವುಗಳಿಗೆ ತಡೆಗೋಡೆ ಅಥವಾ ಬೇಲಿ ಹಾಕಲು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದ್ದಾರೆ.
ಅವರು ಬುಧವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ(ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಳು ಬಿದ್ದಿರುವ ಕಲ್ಲುಕೋರೆಗಳಿಗೆ ಬಿದ್ದು ಸಾವನ್ನಪ್ಪಿರುವ ಹಲವಾರು ಪ್ರಕರಣಗಳು ನಡೆಯುತ್ತಿವೆ. ಕೋರೆ ಕೆಲಸ ಮುಗಿದ ನಂತರ ಯಾವುದೇ ರಕ್ಷಣಾ ತಡೆಗಳನ್ನು ನಿರ್ಮಿಸದೆ ಪಾಳುಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕೂಡಲೇ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಕೋರೆಗಳು ಹಾಗೂ ಪಾಳುಬಿದ್ದಿರುವ ಕೋರೆಗಳ ಸಂಪೂರ್ಣ ವಿವರಗಳನ್ನು ಮುಂದಿನ ಸಭೆಗೆ ನೀಡುವಂತೆ ಸೂಚಿಸಿದರು. ಅಲ್ಲದೇ, ಪಾಳು ಬಿದ್ದಿರುವ ಕೋರೆಗಳ ಜಾಗದ ಮಾಲಕರನ್ನು ಕಂಡುಹುಡುಕಿ, ವರಿಂದಲೇ ಸದರಿ ಕೋರೆಗೆ ತಡೆಗೋಡೆ ಅಥವಾ ಬೇಲಿ ಹಾಕಿಸಲು ಕ್ರಮ ಕೈಗೊಳ್ಳುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಬೋರ್‍ವೆಲ್ ಪಂಪ್ ಇಳಿಸಲು ವಿಳಂಭಿಸುತ್ತಿರುವ ಬಗ್ಗೆ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಸಭೆಯಲ್ಲಿ ಪ್ರಸ್ತಾಪಿಸಿದರು. ಮುಂದಿನ ಕೆಡಿಪಿ ಸಭೆಯೊಳಗೆ ಈಗಾಗಲೇ ಕೊರೆದಿರುವ ಬೋರ್‍ವೆಲ್‍ಗಳಿಗೆ ಪಂಪ್‍ಸೆಟ್‍ಗಳನ್ನು ಅಳವಡಿಸಿ, ಅವು ಕಾರ್ಯ ಆರಂಭಿಸುವಂತೆ ಕ್ರಮ ಕೈಗೊಳ್ಳಲು ಜಿ.ಪಂ. ಅಧ್ಯಕ್ಷರು ಸೂಚಿಸಿದರು. ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಶಾಲೆಗಳ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯಲ್ಲಿ ಪೂರ್ತಿಗೊಳಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಆಹಾರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ಶಾಲಾ-ಕಾಲೇಜುಗಳೊಂದಿಗೆ ಸೇರಿ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಆಹಾರ ಸುರಕ್ಷತಾ ಅಧಿಕಾರಿಗೆ ಜಿ.ಪಂ. ಸಿಇಓ ಸೂಚಿಸಿದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ನಿವೇಶನ ಒದಗಿಸಲು ಜಿಲ್ಲೆಯ ಹಲವೆಡೆ ಭೂದಾಖಲೆಗಳ ಮತ್ತು ಸಮರ್ಪಕ ಸರ್ವೇ ನಡೆಸದೆ ವಿಳಂಭವಾಗುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರದ ವಸತಿ ಯೋಜನೆಗಳ ನಿವೇಶನಗಳಿಗೆ ಆದ್ಯತೆಯಲ್ಲಿ ಸರ್ವೇ ಕಾರ್ಯ ನಡೆಸುವಂತೆ ತಿಳಿಸಿದರು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ವಾರ್ಷಿಕೋತ್ಸವ ಅಥವಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ವಾರ್ಷಿಕೋತ್ಸವ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಉಪಸ್ಥಿತರಿದ್ದರು.


Spread the love

Exit mobile version