
ಪಿಕಪ್ ಢಿಕ್ಕಿ; ಚಾಲಕ ಸೇರಿ ಲಾರಿ ರಿಪೇರಿ ಮಾಡುತ್ತಿದ್ದ ಮೂವರು ಮೃತ್ಯು
ಉಪ್ಪಿನಂಗಡಿ: ಕೆಟ್ಟು ನಿಂತ ಲಾರಿಯನ್ನು ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಬೊಲೆರೋ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೆಕ್ಯಾನಿಕಲ್ ಗಳು ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಬೆದ್ರೋಡಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ಈ ಅಪಘಾತ ಸಂಭವಿಸಿದೆ.
ಮೃತರನ್ನು ಮೆಕ್ಯಾನಿಕ್ ಗಳಾದ ಮಹಮ್ಮದ್ ಅಫ್ಜಲ್, ರೆಹಮಾನ್ ಹಾಗೂ ಲಾರಿ ಚಾಲಕ ಮಧುಸೂಧನ್ ಎಂದು ಗುರುತಿಸಲಾಗಿದೆ
ರಸ್ತೆ ಬದಿ ಕೆಟ್ಟು ನಿಂತಿದ್ದ ಆಂಧ್ರಪ್ರದೇಶದ ಲಾರಿಯನ್ನು ಮೂವರು ಮೆಕ್ಯಾನಿಕಲ್ ಗಳು ದುರಸ್ತಿ ಮಾಡುತ್ತಿದ್ದ ವೇಳೆ ಬೊಲೆರೋ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಿಂದ ಇಬ್ಬರು ಮೆಕ್ಯಾನಿಕಲ್ ಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ ಲಾರಿ ಚಾಲಕ ಮಧುಸೂಧನ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.