ಪಿರಿಯಾಪಟ್ಟಣದಲ್ಲಿ ಸುಂದರ ಗ್ರಾಮೀಣ ದಸರಾ

Spread the love

ಪಿರಿಯಾಪಟ್ಟಣದಲ್ಲಿ ಸುಂದರ ಗ್ರಾಮೀಣ ದಸರಾ

ಪಿರಿಯಾಪಟ್ಟಣ: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಮಿತಿ ಮತ್ತು ತಾಲ್ಲೂಕು ಗ್ರಾಮೀಣ ದಸರಾ ಆಚರಣೆ ಸಮಿತಿ ವತಿಯಿಂದ ಪಟ್ಟಣದಲ್ಲಿ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.

ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ನಾಡಿನ ಜನತೆ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಕೆ.ಮಹದೇವ್ ಅವರು ಬಳಿಕ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು, ಮೆರವಣಿಗೆಯಲ್ಲಿ ದೈಹಿಕ ಶಿಕ್ಷಕ ಸುರೇಶ್ ಅವರು ರಚಿಸಿದ ಮೈಸೂರು ಹಾಗೂ ಚಿತ್ರದುರ್ಗ ಸಂಸ್ಥಾನ ಮತ್ತು ವೀರವನಿತೆಯರ ಸ್ತಬ್ಧ ಚಿತ್ರದೊಂದಿಗೆ ಡೊಳ್ಳು, ನಂದಿಧ್ವಜ, ಕಂಸಾಳೆ, ಗೊರವ, ಡಮರುಗ, ಕೀಲುಬೊಂಬೆ, ಪೂಜಾ ಕುಣಿತ, ವೀರಗಾಸೆ, ಹುಲಿವೇಷ, ಶಿವತಾಂಡವ ನೃತ್ಯಗಳ ಕಲರವ ಜತೆಗೆ ಟಿಬೆಟಿಯನ್, ಕೊಡಗು ಗೌಡ, ಆಶಾ ಕಾರ್ಯಕರ್ತೆಯರು ಹಾಗು ಆದಿವಾಸಿ ಜನಾಂಗದವರು ನೃತ್ಯ ಮಾಡುತ್ತ ಪೂರ್ಣಕುಂಭ ಮೆರವಣಿಗೆಯಲ್ಲಿ ಪಟ್ಟಣದ ಬಿ.ಎಂ.ರಸ್ತೆ, ಎಸ್‌.ಜೆ ರಸ್ತೆ, ಚನ್ನಪಟ್ಟಣ ಬೀದಿ, ಗೊಲ್ಲರ ಬೀದಿ, ನುಗ್ಗೇಹಳ್ಳಿ ರಸ್ತೆ, ದೊಡ್ಡ ಬೀದಿ, ನೆಹರು ರಸ್ತೆ, ಬೆಟ್ಟದಪುರ ವೃತ್ತ, ಸಂತೆಪೇಟೆ ಮೂಲಕ ಸಾಗಿ ಗೋಣಿಕೊಪ್ಪ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಬಳಿಯ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ತಲುಪಿದರು.

ಮೆರವಣಿಗೆಗೆ ಚಾಲನೆ ನೀಡಿದ ಸ್ಥಳದಿಂದ ವೇದಿಕೆ ಕಾರ್ಯಕ್ರಮ ಸ್ಥಳದವರೆಗೆ ಶಾಸಕ ಕೆ.ಮಹದೇವ್ ಅವರು ತಹಸೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು, ಮೆರವಣಿಗೆಯುದ್ದಕ್ಕೂ ಸರ್ಕಾರಿ ಅಧಿಕಾರಿಗಳು ಡೊಳ್ಳು ಸದ್ದಿಗೆ ನೃತ್ಯ ಮಾಡಿ ರಂಜಿಸಿದರು, ಪುರುಷ ಅಧಿಕಾರಿಗಳು ಸಾಂಪ್ರದಾಯಿಕ ಬಿಳಿ ಪಂಚೆ ಶಲ್ಯ ಶರ್ಟ್ ತೊಟ್ಟರೆ ಮಹಿಳೆಯರು ರೇಷ್ಮೆ ಸೇರಿದಂತೆ ವಿವಿಧ ಬಗೆಯ ಸೀರೆ ತೊಟ್ಟು ಸಂಭ್ರಮಿಸಿದರು, ವೇದಿಕೆ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಭ್ರೂಣ ಹತ್ಯೆ ಕುರಿತಂತೆ ಕಿರು ನಾಟಕ ಮಾಡಿ ಅರಿವು ಮೂಡಿಸಲಾಯಿತು.

ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಮಾತನಾಡಿ ನವರಾತ್ರಿಯ ಶುಭ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈಭವದ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಮಿತಿ ವತಿಯಿಂದ ಬಹುಮಾನ ವಿತರಣೆ ಹಾಗೂ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಪ್ರಗತಿಪರ ಕೃಷಿಕರಿಗೆ ಸನ್ಮಾನ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡಗಳಿಗೆ ಪ್ರೋತ್ಸಾಹ ಧನವನ್ನು ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ವಿತರಿಸಿದರು.

ಪುರಸಭೆ ಉಪಾಧ್ಯಕ್ಷೆ ಪಿ.ಕೆ ಆಶಾ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿ ಕೃಷ್ಣ ಹಾಗೂ ಸದಸ್ಯರು, ಮುಖ್ಯಾಧಿಕಾರಿ ಮಹೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮೋಹನ್ ಕುಮಾರ್, ಸಿಡಿಪಿಒ ಮಮತಾ, ಎಡಿಎಲ್ ಆರ್ ಚಿಕ್ಕಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಸರ್ವೆ ಅಧಿಕಾರಿ ಎಂ.ಕೆ ಪ್ರಕಾಶ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಬಿಸಿಎಂ ವಿಸ್ತರಣಾಧಿಕಾರಿ ಪ್ರೇಮ್ ಕುಮಾರ್, ಜಿಪಂ ಎಇಇ ಜಯಂತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಇದ್ದರು.


Spread the love