Home Mangalorean News Kannada News ಪಿಲಾರು ಬಾಲ ಯೇಸುವಿನ ಇಗರ್ಜಿಯ ಉದ್ಘಾಟನೆಯ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ

ಪಿಲಾರು ಬಾಲ ಯೇಸುವಿನ ಇಗರ್ಜಿಯ ಉದ್ಘಾಟನೆಯ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ

Spread the love

ಪಿಲಾರು ಬಾಲ ಯೇಸುವಿನ ಇಗರ್ಜಿಯ ಉದ್ಘಾಟನೆಯ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ

ಉಡುಪಿ: ಜನವರಿ 2 ರಂದು ನೂತನವಾಗಿ ನಿರ್ಮಿಸಿರುವ ಶಿರ್ವ ಪಿಲಾರು ಬಾಲ ಯೇಸುವಿನ ಇಗರ್ಜಿಯ ಉದ್ಘಾಟನಾ ಸಮಾರಂಬ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಗೆ ಪೂರ್ವಭಾವಿಯಾಗಿ ಭಾನುವಾರ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಪಿಲಾರು ಜಂಕ್ಷನ್ ಬಳಿ ಹೊರೆ ಕಾಣಿಕೆ ಮೆರವಣಿಗೆಗೆ ವಿದ್ಯುಕ್ತವಾಗಿ ಶಿರ್ವ ವಲಯದ ಪ್ರಧಾನ ಧರ್ಮಗುರುಗಳಾದ ವಂ. ಸ್ಟ್ಯಾನಿ ತಾವ್ರೊ ಅವರು ಚಾಲನೆ ನೀಡಿದರು. ಬಳಿಕ ಹೊರೆ ಕಾಣಿಕೆ ಮೆರವಣಿಗೆಯು ಪಿಲಾರು ಜಂಕ್ಷನ್‍ನಿಂದ ನೂತನ ಚರ್ಚಿಗೆ ಆಗಮಿಸಿತು.

ಪಿಲಾರಿನಿಂದ ನೂತನ ಚರ್ಚಿನ ವರೆಗೆ ಸಾಗಿ ಬಂದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ನೂತನ ಪಿಲಾರು ಬಾಲಯೇಸುವಿನ ಚರ್ಚಿನ 5 ವ್ಯಾಪ್ತಿಯ ವಾಳೆಯ ಸದಸ್ಯರು, ಶಿರ್ವ ಆರೋಗ್ಯ ಮಾತೆಯ ಇಗರ್ಜಿಯ ಸದಸ್ಯರುಗಳು, ಸ್ಥಳೀಯ ಪಿಲಾರು ಗಣೇಶೋತ್ಸವ ಸಮಿತಿ, ಹಿಂದು ಬಾಂಧವರು, ಪಿಲಾರ್ ಫ್ರೆಂಡ್ಸ್ ಸದಸ್ಯರುಗಳು ಆಗಮಿಸಿ ಹೊರೆಕಾಣಿಕೆಯನ್ನು ಸಮರ್ಪಿಸಿದರು. ಹೊರೆಕಾಣಿಕೆಯಲ್ಲಿ ಸ್ಥಳೀಯ ಗ್ರಾಮಸ್ಥರು, ಸರ್ವಧರ್ಮಿಯ ಭಕ್ತರು ಭಾಗವಹಿಸಿ ಗಮನ ಸೆಳೆದರು.

ಭಕ್ತಾದಿಗಳು ನೀಡಿದ ಹೊರೆಕಾಣಿಕೆ ಧರ್ಮಗುರು ವಂ ಸ್ಟ್ಯಾನಿ ತಾವ್ರೊ ಪ್ರೀತಿಯಿಂದ ಸ್ವೀಕರಿಸಿದರು. ಬಳಿಕ ಹೊರೆಕಾಣಿಕೆ ಮೆರವಣಿಗೆಗೆ ಸಹಕರಿಸದವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ. ಮಹೇಶ್ ಡಿಸೋಜಾ, ಪಿಲಾರು ಬಾಲ ಯೇಸುವಿನ ಇಗರ್ಜಿಯ ಮೇಲ್ವಿಚಾರಕ ಧರ್ಮಗುರು ವಂ ಕಿರಣ್ ನಜ್ರೆತ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, ಆಯೋಗಗಳ ಸಂಚಾಲಕರಾದ ಮೆಲ್ವಿನ್ ಆರಾನ್ಹಾ, ಪಿಲಾರು ಬಾಲ ಯೇಸುವಿನ ಇಗರ್ಜಿಯ ಸಂಯೋಜಕ ವಲೇರಿಯನ್ ಮಚಾದೊ, ಮುದರಂಗಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಡೇವಿಡ್ ಡಿಸೋಜಾ, ಶಿರ್ವ ಗ್ರಾಪಂ. ಸದಸ್ಯ ಮೆಲ್ವಿನ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.

ನೂತನವಾಗಿ ನಿರ್ಮಿಸಿರುವ ಬಾಲಯೇಸುವಿನ ದೇವಾಲಯವನ್ನು ಜನವರಿ 2 ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಉದ್ಘಾಟಿಸಿ ಆಶಿರ್ವಚಿಸಲಿದ್ದಾರೆ.


Spread the love

Exit mobile version