ಪಿಲಿಕುಳ ಪ್ರಾಣಿಗಳಿಗೆ ವಿಷಪೂರಿತ ಆಹಾರ ಪೊರೈಕೆ ಆರೋಪ: ತನಿಖೆ ಆರಂಭಿಸಿದ ಪೊಲೀಸರು
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಪೂರೈಸುವ ಮಾಂಸಕ್ಕೆ ಕೊಳೆತ ಮತ್ತು ವಿಷಪೂರಿತ ಮಾಂಸವನ್ನು ಬೆರೆಸಿ ಪ್ರಾಣಿಗಳನ್ನು ಕೊಲ್ಲುವ ಹುನ್ನಾರ ನಡೆದಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಲಭ್ಯವಾದ ವಾಯ್ಸ ರೆಕಾರ್ಡ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪಿಲಿಕುಳಕ್ಕೆ ಪ್ರಸ್ತುತ ಹೊಸ ಗುತ್ತಿಗೆದಾರರೊಬ್ಬರು ಮಾಂಸ ಪೂರೈಸುತ್ತಿದ್ದು, ಈ ಮಾಂಸಕ್ಕೆ ಕೊಳೆತ ಮಾಂಸ ಮತ್ತು ವಿಷಪೂರಿತ ಮಾಂಸವನ್ನು ಬೆರೆಸುವ ಬಗ್ಗೆ ಈ ಹಿಂದಿನ ಟೆಂಡರುದಾರರು ಉದ್ಯಾನದ ಸಿಬಂದಿಯೊಂದಿಗೆ ಮಾತನಾಡಿರುವ ವಾಯ್ಸ ರೆಕಾರ್ಡ್ ಲಭ್ಯವಾಗಿದೆ. ಆ ಮೂಲಕ ಪ್ರಾಣಿಗಳನ್ನು ಕೊಲ್ಲಲು ಹುನ್ನಾರ ನಡೆಸಿರುವ ಬಗ್ಗೆ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ| ಪ್ರಶಾಂತ್ ಪೈ ಕಾವೂರು ಠಾಣೆಗೆ ದೂರು ನೀಡಿದ್ದರು.
ದೂರನ್ನು ಆಧರಿಸಿ, ವಾಯ್ಸ್ ರೆಕಾರ್ಡ್ ಇರುವ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದಲ್ಲಿರುವ ಧ್ವನಿ ಮತ್ತು ಏನೆಲ್ಲ ಮಾತುಕತೆ ನಡೆಸಿದ್ದಾರೆ ಎನ್ನುವ ಬಗ್ಗೆ ಎಫ್ಎಸ್ಎಲ್ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಪೊಲೀಸರು ತಿಳಿಸಿದ್ದಾರೆ.