ಪಿಲಿಕುಳ ಮೃಗಾಲಯಕ್ಕೆ ಬಿಳಿ ಹುಲಿಯ ಆಗಮನ

Spread the love

ಪಿಲಿಕುಳ ಮೃಗಾಲಯಕ್ಕೆ ಬಿಳಿ ಹುಲಿಯ ಆಗಮನ
 
ಮಂಗಳೂರು: ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಚೆನ್ನೈನ ಅರಿಗ್ಣರ್ ಅಣ್ಣ ಮೃಗಾಲಯದಿಂದ ಒಂದ ಬಿಳಿ ಹೆಣ್ಣು ಹುಲಿ ಕಾವೇರಿ ಮತ್ತು ಹೆಣ್ಣು ಉಷ್ಟ್ರ ಪಕ್ಷಿಯನ್ನು ತರಿಸಿಕೊಳ್ಳಲಾಗಿದೆ. ಪಿಲಿಕುಳ ಮೃಗಾಲಯದಿಂದ ಒಂದು ಬೆಂಗಾಲ್‌ ಹುಲಿ ಸಂಜಯ್, ನಾಲ್ಕು ಕಾಡುನಾಯಿಗಳು ಹಾಗೂ ಕೆಲವು ಉರಗಗಳನ್ನು ಕಳುಹಿಸಿಕೊಡಲಾಗುವುದು.

ಪಿಲಿಕುಳದಲ್ಲಿ ಈಗಾಗಲೇ 11 ಹುಲಿಗಳು (ಏಳು ಗಂಡು, ನಾಲ್ಕು ಹೆಣ್ಣು) ಮತ್ತು ಎರಡು ಗಂಡು ಉಷ್ಟ್ರ ಪಕ್ಷಿಗಳಿವೆ.

ಹೊಸ ಅತಿಥಿಯಾಗಿ ಆಗಮಿಸಿರುವ ಬಿಳಿ ಹುಲಿ ಕಾವೇರಿಯನ್ನು ಕ್ವಾರಂಟೈನ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸ್ಥಳೀಯ ಪರಿಸರಕ್ಕೆ ಒಗ್ಗಿದ ನಂತರ ವಾರದೊಳಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಗುಜರಾತಿನ ರಾಜಕೋಟ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹ, ಭಾರತೀಯ ತೋಳಗಳು ಮತ್ತು ಕೆಲವು ಅಪರೂಪದ ಪಕ್ಷಿಗಳನ್ನು, ಮಹಾರಾಷ್ಟ್ರದ ಗೋರೆವಾದ ಮೃಗಾಲಯದಿಂದ ಬಿಳಿ ಕೃಷ್ಣಮೃಗಗಳು ಮತ್ತು ಕರಡಿಗಳನ್ನು ಹಾಗೂ ಒಡಿಶಾದ ನಂದನಕಾನನ ಮೃಗಾಲಯದಿಂದ ಅಪರೂಪದ ಹೋಗ್ ಜಿಂಕೆ, ನೀಲಗಾಯಿಗಳು ಮತ್ತು ಪಕ್ಷಿಗಳನ್ನು ಪ್ರಾಣಿ ವಿನಿಯ ಯೋಜನೆಯಡಿ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಪಡೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.


Spread the love