
ಪುಂಜಾಲಕಟ್ಟೆ: ಬಾಲಕಿ ಮೇಲೆ ಅತ್ಯಾಚಾರ: 10 ವರ್ಷ ಜೈಲು ಶಿಕ್ಷೆ
ಪುಂಜಾಲಕಟ್ಟೆ: ನಾಲ್ಕು ವರ್ಷದ ಹಿಂದೆ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ನ್ಯಾಯಾಲಯ ಫೆ. 23ರಂದು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಪುಲ್ಲೇರಿ ನಿವಾಸಿ ಸತೀಶ್ ಪೂಜಾರಿ (35) ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್ಟಿ-ಎಸ್ಸಿ 1, (ಪೊಕೊ) ನ್ಯಾಯಾಲಯದ ನ್ಯಾಯಾಧೀಶರು ನಮೂದಿಸಿದ ಕಾಯ್ದೆ, ಕಲಂಗಳ ಅಡಿಯಲ್ಲಿ 10 ವರ್ಷ ಜೈಲು ಹಾಗೂ 10 ಸಾವಿರ ರೂ.
ದಂಡ, ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಮತ್ತು 6 ತಿಂಗಳ ಜೈಲು ಹಾಗೂ 1 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಘಟನೆ ಹಿನ್ನೆಲೆ: 2019ರ ಫೆ. 11ರಂದು ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಛೆಗೆೆ ವಿರುದ್ಧವಾಗಿ ಅತ್ಯಾಚಾರ ಮಾಡಿದ ಬಗ್ಗೆ 2019 ಫೆ. 22ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಅಂದಿನ ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರು ಆರೋಪಿ ಸತೀಶ್ ಪೂಜಾರಿಯನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದ್ದು, ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯವಾಗಿ ಆರೋಪಿತನ ವಿರುದ್ಧ ಆರೋಪ ಸಾಬೀತಾಗಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಸಹನಾದೇವಿ ವಾದಿಸಿದ್ದರು.